ಉಗ್ರ ದಾಳಿ ಖಂಡಿಸಿ ಪಂಜಿನ ಮೆರವಣಿಗೆ

KMT panju
Published on

ಕುಮಟಾ: ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಖಂಡಿಸಿ ಹಾಗೂ ಉಗ್ರರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಇಲ್ಲಿನ ಯುವಾ ಬ್ರಿಗೇಡ್ ತಂಡ ಹಾಗೂ ನಿವೃತ್ತ ಸೈನಿಕರ ಸಂಘದಿಂದ ಪಟ್ಟಣದ ಮಾಸ್ತಿಕಟ್ಟೆ ವೃತ್ತದಿಂದ ರಥಬೀದಿಯ ಗಾಂಧಿಚೌಕದವರೆಗೆ ಗುರುವಾರ ಸಂಜೆ ಪಂಜಿನ ಮೆರವಣಿಗೆ ನಡೆಸಲಾಯಿತು.

ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವಿನಾಯಕ ನಾಯ್ಕ ಮಾತನಾಡಿ, ಇಷ್ಟು ದಿನ ಸೈನಿಕರನ್ನು ಗುರಿಯಾಗಿಸಿ ಉಗ್ರದಾಳಿಗಳು ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಸೈನಿಕರಿಗೆ ಹಲವು ವ್ಯವಸ್ಥೆಗಳನ್ನು ನೀಡಿ ಹೆಚ್ಚು ಸುರಕ್ಷಿತಗೊಳಿಸಿದೆ. ಹೀಗಾಗಿ ಈಗ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಹೇಡಿಯಂತೆ ದಾಳಿ ನಡೆಸಿ ಕೊಂದಿದ್ದಾರೆ. ಕಾಶ್ಮೀರದಲ್ಲಿ ನಡೆದ ಘಟನೆ ನಾಳೆ ಕುಮಟಾದಲ್ಲೂ ನಡೆಯಬಹುದು. ಹೀಗಾಗಿ ದೇಶದ್ರೋಹಿಗಳನ್ನು ಹೊಡೆದೋಡಿಸಲು ಎಲ್ಲರೂ ಒಂದಾಗಬೇಕು ಎಂದರು.

ಯುವಾ ಬ್ರಿಗೇಡ್ ವಿಭಾಗ ಸಂಚಾಲಕ ಅಣ್ಣಪ್ಪ ನಾಯ್ಕ, ಹಿಂದು ಹೋರಾಟಗಾರ ಪ್ರಶಾಂತ ನಾಯ್ಕ ಮಾತನಾಡಿದರು.

ನಿವೃತ್ತ ಸೈನಿಕರು, ಯುವಾ ಬ್ರಿಗೇಡ್ ಸದಸ್ಯರು, ಹಿಂದು ಜಾಗರಣಾ ವೇದಿಕೆ ಸದಸ್ಯರು, ಹಿಂದು ಸನಾತನ ಸಂಸ್ಥೆಯ ಸದಸ್ಯರು ಇನ್ನಿತರ ಹಿಂದು ಮುಖಂಡರು ಪಾಲ್ಗೊಂಡಿದ್ದರು.

ಖಂಡನೆ

ಕಾಶ್ಮೀರದ ಬೈಸರಾನ್ ಕಣಿವೆಯಲ್ಲಿ ಪಾಕ್ ಪ್ರಚೋದಿತ ದುಷ್ಕರ್ಮಿಗಳು ಅಮಾಯಕ ಪ್ರವಾಸಿಗರ ನರಮೇಧ ನಡೆಸಿರುವುದನ್ನು ಶ್ರೀ ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲ ಖಂಡಿಸುತ್ತದೆ ಮತ್ತು ಈ ನರಮೇಧದ ಹಿಂದಿರುವ ಶಕ್ತಿಗಳನ್ನು ಕೇಂದ್ರ ಸರ್ಕಾರ ನಿರ್ಮೂಲನ ಮಾಡಲಿ ಎಂದು ಮಹಾಮಂಡಲ ಹಾರೈಸುತ್ತದೆ ಎಂದು ಮಂಡಲದ ಅಧ್ಯಕ್ಷ ಮೋಹನ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net