

ಸಂಡೂರು: ಯುವ ಜನಾಂಗ ದುಶ್ಚಟಗಳಿಗೆ ದಾಸರಾದರೆ ಜೀವನ ಹಾಳಾಗಲಿದೆ ಎಂದು ಮುಖ್ಯ ಶಿಕ್ಷಕ ಧರಿಯಪ್ಪ ರಾಥೋಡ್ ಹೇಳಿದರು.
ತಾಲೂಕಿನ ತೋರಣಗಲ್‌ನಲ್ಲಿ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಲಿಂಗೈಕ್ಯ ಡಾ.ವಿಜಯಮಹಾಂತೇಶ ಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಟರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ವ್ಯಸನಿಗಳಾಗುವುದರಿಂದ ಜೀವನ ಸರ್ವನಾಶವಾಗಲಿದೆ. ಉತ್ತಮ ಜೀವನ ರೂಪಿಸಿಕೊಳ್ಳಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಮಾನಸಿಕ ಒತ್ತಡ ಮತ್ತು ಖಿನ್ನತೆ ಬಳಲುತ್ತಿರುವವರು ಬಹುಬೇಗ ಮಾದಕ ಜಾಲದಲ್ಲಿ ಸಿಲುಕಿಕೊಳ್ಳುತ್ತಾರೆ. ಬಳಿಕ ಇಡೀ ಕುಟುಂಬವೇ ತೊಂದರೆಗೆ ಒಳಗಾಗುತ್ತದೆ. ವ್ಯಸನ ಮುಕ್ತ ರಾಷ್ಟ್ರ ರೂಪಿಸಲು ಎಲ್ಲರೂ ಕೈ ಜೋಡಿಸೋಣ ಎಂದು ತಿಳಿಸಿದರು.