

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಐದು ವಿದ್ಯಾರ್ಥಿಗಳನ್ನು ಜಿ.ಪಂ ಸಿಇಒ ಡಾ.ಕೆ.ಎನ್.ಅನುರಾಧಾ ಸನ್ಮಾನಿಸಿದರು.
ಸರ್ಕಾರಿ ಶಾಲೆಗಳಲ್ಲಿಯೂ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಪರಿಶ್ರಮ, ಪಾಲಕರ ಹಾಗೂ ಶಿಕ್ಷಕರ ಸಹಕಾರದಿಂದ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಲು ಸಾಧ್ಯವಾಗಿದೆ. ನಿಮ್ಮ ಈ ಸಾಧನೆ ಕಿರಿಯ ಸಹಪಾಠಿಗಳಿಗೂ ಮಾದರಿಯಾಗಲಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಶುಭಹಾರೈಸಿದರು.
ಮುಂದಿನ ನಿಮ್ಮ ಉನ್ನತ ವಿದ್ಯಾಭ್ಯಾಸದಲ್ಲಿಯೂ ಇದೇ ರೀತಿ ಉತ್ತಮ ಅಂಕಗಳನ್ನು ಗಳಿಸಿ ಜಿಲ್ಲೆಗೆ, ಪಾಲಕರಿಗೆ ಒಳ್ಳೆಯ ಹೆಸರು ತರಬೇಕು. ಜೀವನದಲ್ಲಿ ಉತ್ತಮ ಗುರಿ ಅಳವಡಿಸಿಕೊಂಡು ಮುನ್ನಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಏಕಾಗ್ರತೆ, ಆಸಕ್ತಿ ಹಾಗೂ ಗುರಿಯಿದ್ದರೆ ಏನಾನ್ನಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಈ ಬಾರಿ ಎಸ್ಸೆಸ್ಸೆಲ್ಸಿ ಲಿತಾಂಶವೇ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸತತ ಪರಿಶ್ರಮ ಈ ಸಾಧನೆಗೆ ಕಾರಣವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳ ಈ ಸಾಧನೆ ಅವರ ಜೀವನದ ಮುಂದಿನ ಭವಿಷ್ಯಕ್ಕೆ ಮೈಲುಗಲ್ಲಾಗಿದೆ ಈ ಸಾಧನೆ ಮಾಡಿದ ವಿದ್ಯಾರ್ಥಿಗಳು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ ಎಂದರು.
ಐವರು ವಿದ್ಯಾರ್ಥಿಗಳಿಗೆ ಸನ್ಮಾನ: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಜೆ.ಎಂ ಮೋಹನ್ 625 ಕ್ಕೆ 623 ಅಂಕ ಪಡೆದು ವಸತಿ ಶಾಲೆಗಳಲ್ಲೇ ಟಾರ್ ಆಗಿದ್ದಾರೆ. ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಐಶ್ವರ್ಯ 625 ಕ್ಕೆ 618 ಅಂಕ ಹಾಗೂ ಆರ್.ನಿಶ್ಚಿತಾ 625 ಕ್ಕೆ 617 ಅಂಕ ಪಡೆಯುವ ಮೂಲಕ ಕ್ರಮವಾಗಿ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜನಪ್ಪ ತಿಳಿಸಿದರು.
ರಾಜ್ಯಕ್ಕೆ ಇಬ್ಬರು ಟಾರ್ಸ್: ರಾಜ್ಯದ 22 ಟಾಪರ್ಸ್‌ಗಳ ಪೈಕಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳಾದ ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿಯ ನೀಲಗಿರೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿಸಿ. ಭಾವನಾ ಹಾಗೂ ದೊಡ್ಡಬಳ್ಳಾಪುರ ತಾಲೂಕು ಮೆಳೆಕೋಟೆ ಕ್ರಾಸ್‌ನಲ್ಲಿನ ಎಸ್‌ಜೆಆರ್‌ಸಿ ಪ್ರೌಢಶಾಲೆಯ ಎ.ಸಿ.ರಂಜಿತಾ 625 ಕ್ಕೆ 625 ಪೂರ್ಣಾಂಕ ಪಡೆದಿದ್ದಾರೆ ಈ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಶುಭಹಾರೈಸಲಾಯಿತು ಎಂದು ತಿಳಿಸಿದರು.
ಗ್ರಾಮೀಣರ ಮೇಲುಗೈ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾರಿಗೂ ಕಡಿಮೆ ಇಲ್ಲ ಎಂಬುದನ್ನೂ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ. ಹಳ್ಳಿಯ ರೈತ ಕುಟುಂಬ ಹಾಗೂ ನೇಕಾರಿಕೆ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ರಾಜ್ಯಕ್ಕೆ ಪ್ರಥಮ ಸ್ಥಾನಪಡೆದು ಸಾಧನೆ ಮಾಡಿದ್ದಾರೆ. ಇದು ಜಿಲ್ಲೆಗೆ ಕೀರ್ತಿ ತಂದಂತಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಹೇಳಿದರು.