ಸ್ಥಳನಾಮ ಅಧ್ಯಯನ, ಮಾಹಿತಿ ಸಂಗ್ರಹ ಕಾರ್ಯಾಗಾರಕ್ಕೆ ಚಾಲನೆ

arebhashe
Published on

ಮಡಿಕೇರಿ: ಕರ್ನಾಟಕ ಅರೆಭಾ?ೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಸ್ಥಳನಾಮಗಳ ಅಧ್ಯಯನ ಹಾಗೂ ಮಾಹಿತಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದು, ಆರಂಭದಲ್ಲಿ ಪ್ರಾಯೋಗಿಕವಾಗಿ ಸುಳ್ಯ ತಾಲೂಕನ್ನು ಆಯ್ದುಕೊಳ್ಳಲಾಗಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಕಾರದಲ್ಲಿ ಇತ್ತೀಚೆಗೆ ನಡೆದ ಸ್ಥಳನಾಮ ಅಧ್ಯಯನ ಮತ್ತು ಮಾಹಿತಿ ಸಂಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಂದು ಸ್ಥಳದ ಹೆಸರಿಗೂ ಒಂದೊಂದು ಕಾರಣ, ಭೌಗೋಳಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ. ಆ ಹಿನ್ನೆಲೆಯಲ್ಲಿ ಕಾಲ ಕ್ರಮೇಣದಲ್ಲಿ ಬರಬರುತ್ತಾ ಬಾಯಿಂದ ಬಾಯಿಗೆ ಮಾತನಾಡುವ ಸಂದರ್ಭದಲ್ಲಿ ಆಯಾಯ ಕಾಲಕ್ಕೆ ತಕ್ಕಂತೆ ಊರಿನ ಹೆಸರು ಬದಲಾಗುತ್ತಾ ಹೋದದ್ದೂ ಇದ್ದು, ಹಳೇ ಹೆಸರನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ನುಡಿದರು.

ಆಧುನಿಕ ಯುಗದಲ್ಲಿ ಮೂಲ ಹೆಸರನ್ನು ಬದಲಿಸಿ ಯಾವುದಾದರು ಖ್ಯಾತನಾಮರ ಹೆಸರಿನೊಂದಿಗೆ ಮರುನಾಮಕರಣ ಮಾಡುವುದೂ ನಡೆಯುತ್ತಿದೆ. ಈ ಸ್ಥಳದ ಮೂಲ ಹೆಸರು ಮತ್ತು ಅದರ ಮೂಲಸ್ವರೂಪದ ವಿವರಣೆ, ಆ ಊರಿಗೆ ಆ ಹೆಸರು ಬರಲು ಕಾರಣ ಮತ್ತಿತರ ಕುತೂಹಲಕಾರಿ ಹಾಗೂ ಆಸಕ್ತಿಯುತ ಅಂಶಗಳನ್ನು ಕಲೆ ಹಾಕುವುದು ಮತ್ತು ಅದನ್ನು ಸಂಗ್ರಹಿಸಿ ರಕ್ಷಿಸುವುದು ಸ್ಥಳನಾಮ ಕಾರ್ಯದ ಉದ್ದೇಶವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲು, ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರುದ್ರಕುಮಾರ್, ವಿದ್ಯಾರ್ಥಿ ಕ್ಷೇಮ ಅಭಿವೃದ್ಧಿ ಅಧಿಕಾರಿ ರತ್ನವತಿ, ಎನ್‌ಎಸ್‌ಎಸ್ ಅಧಿಕಾರಿ ಹರಿಪ್ರಸಾದ್, ಚಿತ್ರಲೇಖಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net