

ಚನ್ನಗಿರಿ: ಪುರಾತನ ಸಂಸ್ಕಾರ, ಪರಂಪರೆ ಮತ್ತು ನಾಡು- ನುಡಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಹೆಬ್ಬಾಳು ಮಠದ ಶ್ರೀಮಹಾಂತ ರುದ್ರೇಶ್ವರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸುಕ್ಷೇತ್ರ ತೋಪೇನಹಳ್ಳಿಯ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಶುಕ್ರವಾರ 60 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿರುವ ನೂತನ ಶ್ರೀಗಂಗಾಮಾತೆ ಪುಷ್ಕರಣಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ- ಸಂಪ್ರದಾಯವನ್ನು ನಾವು ಮುಂದುವರಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಅದನ್ನು ದಾಟಿಸಬಹುದು. ಪರಂಪರೆ, ಕಲೆ, ಸಾಹಿತ್ಯ ಇವು ಸಹ ಬದುಕಿಗೆ ಮುಖ್ಯವಾಗಿದೆ. ತಲ್ಲಣದ ಬದುಕಿನಲ್ಲಿ ಬಹಿರಂಗದ ಚಿಕಿತ್ಸೆಗಿಂತ ಅಂತರಂಗದ ಚಿಕಿತ್ಸೆ ನೀಡಬೇಕು. ಅಧ್ಯಾತ್ಮದಿಂದ ಉತ್ತಮ ಸಂಸ್ಕಾರ ಜ್ಞಾನ ಹೊಂದಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಾಧ್ಯ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಂ. ರೇವಣಸಿದ್ದಪ್ಪ ಮಾತನಾಡಿ, 1336 ರಲ್ಲಿ ಆನೆಗೊಂದಿ ದೊರೆಗಳಿಂದ ನಿರ್ವಣವಾದ ದೇವಾಲಯಕ್ಕೆ ಸೇರಿದ ಮಜ್ಜನ ಹೊಂಡ ಶಿಥಿಲಾವಸ್ಥೆಯಲ್ಲಿತ್ತು. ಗ್ರಾಪಂ ಮತ್ತು ಗ್ರಾಮಸ್ಥರು ಸೇರಿ ಪುಷ್ಕರಣಿ ನಿರ್ಮಾಣ ಮಾಡಿದ್ದಾರೆ ಎಂದರು.
ವನಜಾಕ್ಷಮ್ಮ ಶಿವಲಿಂಗಪ್ಪ, ಗ್ರಾಪಂ ಅಧ್ಯಕ್ಷೆ ಸಂಜೀವಮ್ಮ, ಬ್ರಹ್ಮಕುಮಾರಿ ಮಮತಕ್ಕ, ಗುರುಪ್ರಸಾದ್, ಗಂಜಿಗಟ್ಟೆ ಕೃಷ್ಣಮೂರ್ತಿ, ಬಿ.ಕೆ. ರಂಗಸ್ವಾಮಿ, ದೊರೆಸ್ವಾಮಿ, ಎನ್. ರಂಗಸ್ವಾಮಿ, ಸಿದ್ದಪ್ಪ, ಸಿದ್ದನಮಠ ರಾಜಣ್ಣ, ಮೆದಿಕೆರೆ ಸಿದ್ದೇಶ್, ಯಕ್ಕೆಗೊಂದಿ ಗಣೇಶ್, ಇಂಜಿನೆಯರ್ ಬಾನುಪ್ರಕಾಶ್ ಹಾಗೂ ಗ್ರಾಮಸ್ಥರು ಇದ್ದರು.