

ಕೆ.ಆರ್.ನಗರ: ಪಟ್ಟಣದ ಹೊರ ವಲಯದ ಹಾಸನ-ಮೈಸೂರು ರಸ್ತೆಯಲ್ಲಿರುವ ಆದಿಶಕ್ತಿ ತೋಪಮ್ಮನ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು. ತೋಪಮ್ಮನ ವಿಗ್ರಹಕ್ಕೆ ವಿವಿಧ ಬಗೆಯ ಹೂ ಅಲಂಕಾರ ಮಾಡಲಾಗಿತ್ತು. ಪಟ್ಟಣ ಸೇರಿದಂತೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಹಾಗೂ ಹುಣಸೂರು ತಾಲೂಕಿನ ನೂರಾರು ಗ್ರಾಮಗಳ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹರಕೆ ತೀರಿಸಿದರು.
ಜಾತ್ರೆ ಹಿನ್ನೆಲೆಯಲ್ಲಿ ದೇವಾಲಯದ ಸುತ್ತ ಹತ್ತ್ತಾರು ಸಿಹಿತಿಂಡಿ ಅಂಗಡಿಗಳು ಮತ್ತು ವಿವಿಧ ಆಟಿಕೆಗಳ ಮಾರಾಟದ ಅಂಗಡಿಗಳು ಗಮನ ಸೆಳೆದವು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದೇವಾಲಯ ಇರುವುದರಿಂದ ಸುಗಮ ಸಂಚಾರಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಶಿವಪ್ರಕಾಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.
ಶ್ರೀ ಕಾಗಿನೆಲೆ ಕನಕಗುರು ಪೀಠದ ಶಗರೀ ಶಿವಾನಂದಪುರಿ ಸ್ವಾಮೀಜಿ, ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ, ಶಾಸಕ ಡಿ.ರವಿಶಂಕರ್ ದೇವಾಲಯಕ್ಕೆ ಭೇಟಿ ನೀಡಿ ಆದಿಶಕ್ತಿ ತೋಪಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಟ್ರಸ್ಟ್ ವತಿಯಿಂದ ಗಣ್ಯರನ್ನು ಸನ್ಮಾನಿಸಲಾಯಿತು. ಅಲ್ಲದೆ ದೇವಾಲಯದ ಆವರಣದಲ್ಲಿ ರಾತ್ರಿ ಶನಿಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ಪುಷ್ಪಲತಾ ಸಿ.ಪಿ.ರಮೇಶ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಶಂಕರ್‌ಸ್ವಾಮಿ, ನಗರಯೋಜನ ಪ್ರಾಧಿಕಾರದ ನಿರ್ದೇಶಕ ಪ್ರಸನ್ನಕುಮಾರ್, ಆದಿಶಕ್ತಿ ತೋಪಮ್ಮ ದೇಗುಲ ಟ್ರಸ್ಟ್ ಅಧ್ಯಕ್ಷ ಸಿ.ಎ.ರಾಜು, ಗೌರವಾಧ್ಯಕ್ಷ ಅಣ್ಣಯ್ಯ ನಾಯಕ, ಕಾರ್ಯದರ್ಶಿ ಕೆ.ಪಿ.ಜಗದೀಶ್, ಪದಾಧಿಕಾರಿಗಳಾದ ಯೋಗೀಶ್, ಮಾಟೇಗೌಡ, ಜವರೇಗೌಡ, ರಮೇಶ್, ಟಿ.ಎಲ್.ಪರಶಿವಮೂರ್ತಿ, ಕೆ.ಬಿ.ಮಹದೇವ್ ಇತರರಿದ್ದರು.