ಜೆಡಿಎಸ್‌ನಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ: ಸಂಕೇತ್ ಪೂವಯ್ಯ

3adarshkdga1
Published on

ಮಡಿಕೇರಿ: ಜೆಡಿಎಸ್ ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.


ಜೆಡಿಎಸ್ ಯುವ ಘಟಕ ವತಿಯಿಂದ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಪಾಲು ಹೆಚ್ಚಾಗಿದೆ. ಆದರೆ, ಕೆಲವು ಪಕ್ಷದಲ್ಲಿ ಯುವ ಜನತೆಗೆ ಹೆಚ್ಚಿನ ಆದ್ಯತೆ ನೀಡದೇ ಕೇವಲ ಪ್ರಚಾರಕ್ಕೆ ಮಾತ್ರ ಬಳಕೆ ಮಾಡಿಕೊಳ್ಳುತ್ತಿರುವುದು ದುರಾದೃಷ್ಟಕರ. ಜೆಡಿಎಸ್ ಪಕ್ಷದಲ್ಲಿ ಮೊದಲು ಯುವಕರಿಗೆ ಆದ್ಯತೆ ನೀಡಲಾಗುತ್ತಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಗೆ ಜಿಲ್ಲೆಯ ಯುವ ಘಟಕದ ಪದಾಧಿಕಾರಿಗಳು ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.


ಈ ಹಿಂದೆ ದೇವೆಗೌಡರವರು ಸಿದ್ದರಾಮಯ್ಯ, ಮಹದೇವಪ್ಪ, ಬಚ್ಚೇಗೌಡರಂತಹ ಯುವಕರನ್ನು ಅಂದು ಪರಿಚಯಿಸಿದ್ದಾರೆ. ಅದೇ ರೀತಿ ಇಂದು ಕೂಡ ಯುವಕರನ್ನು ಬೆಳೆಸಲಾಗುತ್ತಿದೆ ಎಂದ ಅವರು, ಬಿಜೆಪಿ, ಕಾಂಗ್ರೆಸ್ ಆಡಳಿತರ ವೈಫಲ್ಯ ಹಾಗೂ ನಮ್ಮ ಪಕ್ಷದ ಕೊಡುಗೆ ತಿಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮನೆಮನೆಗೆ ತೆರಳಿ ಮನವರಿಕೆ ಮಾಡುವ ಕೆಲಸವಾಗಬೇಕು ಎಂದು ತಿಳಿಸಿದರು.


ಜಿಲ್ಲೆಯಲ್ಲಿ ಅಧಿಕಾರದಲ್ಲಿರುವ ಶಾಸಕರುಗಳು ೨೫ ವರ್ಷದಿಂದ ಆಯ್ಕೆ ಆಗುತ್ತಿದ್ದರೂ ಕೂಡ ಇದುವರೆಗೆ ಸಚಿವ ಸ್ಥಾನ ನೀಡಿಲ್ಲ. ಕೊಡಗಿನವರಿಗೆ ಪ್ರಾತಿನಿದ್ಯ ನೀಡುತ್ತಿಲ್ಲ. ಜಿಲ್ಲೆಯ ಸಮಸ್ಯೆ ಸಂಪುಟದಲ್ಲಿ ಚರ್ಚೆಯಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ. ಮತದಾರರು ಆತ್ಮಾವಲೋಕನ ಮಾಡಿ ಮತ ಹಾಕಲಿದ್ದು, ಜೆಡಿಎಸ್ ಆಡಳಿತ ನಡೆಸಲಿದೆ ಎಂದು ಹೇಳಿದರು.


ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಿ.ಎಲ್.ವಿಶ್ವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಬಿಜೆಪಿ ಭದ್ರಕೋಟೆ ಎಂದು ಹೇಳುತ್ತಾರೆ. ಆದರೆ, ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದ ಅವರು, ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲದಾಗಿದೆ. ಅಲ್ಲದೇ ಬಿಜೆಪಿಯ ಬಿ ಟೀಂ ಕಾಂಗ್ರೆಸ್ ಆಗಿದ್ದು, ಬಿಜೆಪಿ ಗೆದ್ದರು ಜೆಡಿಎಸ್ ಗೆಲ್ಲಬಾರದು ಎಂಬ ಭಾವನೆ ಕಾಂಗ್ರೆಸ್‌ನದ್ದು ಎಂದು ಹೇಳಿದರು.


ಚುನಾವಣೆಗೆ ಅಭ್ಯರ್ಥಿ ಯಾರೆ ಆದರೂ ಸಂಘಟನೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರು ಜಾತ್ಯತೀತವಾಗಿ ಕೆಲಸ ಮಾಡಬೇಕಾಗಿದ್ದು, ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.


ಸಭೆಯಲ್ಲಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಾಸೀರ್, ಘಟಕದ ವಕ್ತಾರರಾದ ರವಿಕಿರಣ್, ಜಿನಾಸ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಸೈಫುದ್ಧೀನ್, ಮಡಿಕೇರಿ ತಾಲೂಕು ಅಧ್ಯಕ್ಷ ಉಮೇಶ್, ಪ್ರಮುಖರಾದ ಮೋನಿಶ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net