ತೊಗರಿ ಪರಿಹಾರಕ್ಕಾಗಿ ಎತ್ತಿನ ಬಂಡಿ, ರೊಟ್ಟಿ ಬುತ್ತಿಯೊಂದಿಗೆ ಹೋರಾಟ

oppo_0
oppo_0
Published on

ಕಲಬುರಗಿ: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಜಿಲ್ಲೆ ಸೇರಿ ಸುತ್ತಲಿನ ಜಿಲ್ಲೆಗಳಲ್ಲಿ ತೊಗರಿ ಬೆಳೆ ಹಾನಿಯಾಗಿದ್ದು, ಸಾವಿರಾರು ರೂ. ಖರ್ಚು ಮಾಡಿ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ಎಕರೆ ತೊಗರಿಗೆ ೨೫ ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ರೈತ ಹೋರಾಟ ಸಮಿತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನೂರಾರು ಎತ್ತಿನ ಬಂಡಿ, ಟ್ರಾÈಕ್ಟರ್‌ಗಳೊಂದಿಗೆ ಸಹಸ್ರಾರು ರೈತರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿ, ರಸ್ತೆಯಲ್ಲಿಯೇ ಎತ್ತುಗಳ ಕೊರಳು ಹರಿದು, ರೊಟ್ಟಿ ಬುತ್ತಿ ಬಿಚ್ಚಿ, ರೊಟ್ಟಿ, ಪುಂಡಿ ಪಲ್ಯಾ, ಶೇಂಗಾ ಹಿಂಡಿ ಊಟ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ೧.೮೨ ಲಕ್ಷ ಹೆಕ್ಟೇರ್ ತೊಗರಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ವರದಿ ನೀಡಿದೆ. ಆದರೆ ವಾಸ್ತವದಲ್ಲಿ ಸುಮಾರು ೪ ಲಕ್ಷ ಹೆಕ್ಟೇರ್ ತೊಗರಿ ಹಾನಿಗೀಡಾಗಿದ್ದು, ರೈತರು ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ಜಿಲ್ಲೆಯಲ್ಲಿ ಸರಣಿಯಾಗಿ ರೈತರ ಆತ್ಮಹತ್ಯೆ ನಡೆದಿವೆ. ೨೦೨೨-೨೩ರಲ್ಲಿ ಪ್ರತಿ ಪಕ್ಷದಲ್ಲಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್ ಎತ್ತಿನ ಬಂಡಿಗಳೊAದಿಗೆ ಆಗಮಿಸಿ ಹೋರಾಟ ನಡೆಸಿ, ೨೫ ಸಾವಿರ ನೀಡಲು ಆಗ್ರಹಿಸಿದ್ದರು. ಆಗ ೭೩೩.೦೨ ಕೋಟಿ ರೂ. ಸರ್ಕಾರ ಪರಿಹಾರ ನೀಡಿತ್ತು. ಅದೇ ಮಾದರಿ ಈಗಲೂ ಪರಿಹಾರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದರು.

ತೊಗರಿ ಪರಿಹಾರಕ್ಕೆ ೮೦೦ ಕೋಟಿ ರೂ. ಘೋಷಿಸಬೇಕು, ರಾಜ್ಯ ಸರ್ಕಾರವೇ ಸಂಪೂರ್ಣ ವಿಮೆ ನೀಡಬೇಕು, ಜಿಲ್ಲೆಯ ತೊಗರಿ ಬೆಳೆಯುವ ಎಲ್ಲ ರೈತರಿಗೆ ಜಿಐ ಟ್ಯಾಗ್ ಮಾನ್ಯತೆ ನೀಡಬೇಕು, ತೊಗರಿಗೆ ಕನಿಷ್ಠ ೧೦ ಸಾವಿರ ಬೆಂಬಲ ಬೆಲೆ ನೀಡಬೇಕು, ನೆಟೆ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು, ೨೦೨೪-೨೫ನೇ ಸಾಲಿನಲ್ಲಿ ರೈತರ ಬೆಳೆ ವಿಮೆಯಲ್ಲಿ ತಾರತಮ್ಯವಾಗಿದ್ದು, ಪುನಃ ಮಾಪನ ಮಾಡಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಹೋರಾಟ ಸಮಿತಿಯ ಅವ್ವಣ್ಣ ಮ್ಯಾಕೇರಿ, ದಯಾನಂದ ಪಾಟೀಲ್, ಬಸವರಾಜ ಇಂಗಿನ್, ಚಂದ್ರಶೇಖರ ಹಿರೇಮಠ, ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಸುರೇಶ ಸಜ್ಜನ್, ಮಲ್ಲಣ್ಣ ಕುಲ್ಕರ್ಣಿ, ಆದಿನಾಥ ಹೀರಾ, ಮಲ್ಲಣ್ಣ ಕೋಳಕೂರ, ಹಣಮಂತರಾವ ಹೂಗಾರ, ಗಿರೀಶ ಇನಾಂದಾರ, ಶಿವುಗೌಡ ಪಾಟೀಲ್, ಶಶಿಧರ ಸೂಗೂರ, ಬಸವರಾಜ ಗೌನಳ್ಳಿ, ರೇವಣಸಿದ್ದಪ್ಪ ಸಂಕಾಲಿ, ಗಿರಿರಾಜ ಯಳಮೇಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net