ಕರೊನಾದಲ್ಲೂ ಕಾರ್ಪೋರೇಟರ್‌ಗಳ ಪ್ರವಾಸ ! ; ಮಂಗಳೂರು ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ; ಜು.29 ರಿಂದ 31ರವರೆಗೆ ಟ್ರಿಪ್

25Tmk_Palike_Google_Meeting
Published on

ತುಮಕೂರು : ಕರೊನಾ ಸಂಕಷ್ಟದ ನಡುವೆಯೂ ಮಹಾನಗರ ಪಾಲಿಕೆ ಸದಸ್ಯರು ಜು.29 ರಿಂದ ಮೂರು ದಿನ ‘ಅಧ್ಯಯನ’ ಹೆಸರಲ್ಲಿ ಮಂಗಳೂರು ಮೋಜಿನ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ.

ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ನೇತೃತ್ವದಲ್ಲಿ ಕಾರ್ಪೋರೇಟರ್‌ಗಳು, ಅಧಿಕಾರಿಗಳ ತಂಡ ಪ್ರವಾಸಕ್ಕೆ ತೆರಳುತ್ತಿದೆ. ಸರ್ಕಾರದ ಅನುಮತಿಗೆ ಪಾಲಿಕೆ ಆಯುಕ್ತೆ ರೇಣುಕಾ ಪತ್ರ ಬರೆದಿದ್ದು, ಅಲ್ಲಿಂದ ಒಪ್ಪಿಗೆ ಬರುವ ಮುನ್ನವೇ ಮೇಯರ್, ಉಪಮೇಯರ್ ಸೇರಿ 35 ಚುನಾಯಿತ ಸದಸ್ಯರು, ಐವರು ನಾಮಿನಿ ಸದಸ್ಯರು ಹಾಗೂ 5 ಅಧಿಕಾರಿಗಳನ್ನೊಳಗೊಂಡ 45 ಸದಸ್ಯರ ತಂಡವು ಪ್ರವಾಸಕ್ಕೆ ತೆರಳಲು ಅಣಿಯಾಗಿದೆ. ಈ ಹಿಂದೆ 2019ರ ಡಿಸೆಂಬರ್‌ನಲ್ಲಿ 7 ದಿನಗಳ ‘ಅಧ್ಯಯನ’ ಹೆಸರಲ್ಲಿ ಉತ್ತರಭಾರತ ಪ್ರವಾಸ ಕೈಗೊಂಡಿದ್ದು ಸಾಕಷ್ಟು ವಿವಾದ ಹುಟ್ಟುಹಾಕಿತ್ತು.

30 ಲಕ್ಷ ಮೀಸಲು!: ಈ ಬಾರಿ ಪಾಲಿಕೆ ಬಜೆಟ್‌ನಲ್ಲಿ ಸದಸ್ಯರ ಅಧ್ಯಯನ ಪ್ರವಾಸಕ್ಕಾಗಿಯೇ 30 ಲಕ್ಷ ರೂ., ಅನುದಾನ ಮೀಸಲಿಡಲಾಗಿದ್ದು ಮಂಗಳೂರು ಅಧ್ಯಯನ ಪ್ರವಾಸಕ್ಕೆ 10 ಲಕ್ಷ ರೂ., ಖರ್ಚು-ವೆಚ್ಚ ತಯಾರಿ ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ವಿಮಾನದಲ್ಲಿ ತೆರಳಿದ್ದ ಕಾರ್ಪೋರೇಟರ್‌ಗಳು ಈ ಬಾರಿ ಲಕ್ಸುರಿ ಬಸ್‌ನಲ್ಲಿ ತೆರಳುತ್ತಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಗೆ ತೆರಳಲಿರುವ ಕಾರ್ಪೋರೇಟರ್‌ಗಳು ಅಲ್ಲಿನ ಸದಸ್ಯರ ಜತೆ ವಿಷಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ನಂತರ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಲಿದ್ದಾರೆ.

ಪಾಲಿಕೆಯಲ್ಲಿ 17 ಮಹಿಳಾ ಸದಸ್ಯರಿದ್ದು ಅವರ ಜತೆ ಪತಿರಾಯರು ತೆರಳುವ ನಿರೀಕ್ಷೆ ಇದ್ದು ಅಧ್ಯಯನ ತಂಡದ ಸಂಖ್ಯೆ 60 ರಿಂದ 70ಕ್ಕೆ ಮುಟ್ಟಲಿದೆ. ಕರೊನಾ ಸಂಕಷ್ಟದಲ್ಲೂ ಪ್ರವಾಸಕ್ಕೆ ತೆರಳುತ್ತಿರುವ ಕಾರ್ಪೋರೇಟರ್‌ಗಳು ಜನರ ತೆರಿಗೆ ಹಣಕ್ಕೆ ಮೋಸವಾಗದಂತೆ ಅಧ್ಯಯನ ಪ್ರವಾಸ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಅಪ್‌ಲೋಡ್ ಮಾಡಿಲ್ಲ !: ಪ್ರವಾಸಕ್ಕೆ ತೆರಳುವ ಕಾರ್ಪೋರೇಟರ್‌ಗಳು ಅಧ್ಯಯನ ಪ್ರವಾಸದ ಪ್ರಯೋಜನ ಕುರಿತು ಪಾಲಿಕೆ ಅಧಿಕೃತ ವೆಬ್‌ಸೈಟ್‌ನಲ್ಲಿ 15 ದಿನದೊಳಗೆ ಅಪ್‌ಲೋಡ್ ಮಾಡಬೇಕು. ಅಲ್ಲದೆ, ಈ ವರದಿಯನ್ನು ಸರ್ಕಾರ ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಬೇಕೆಂಬ ಷರತ್ತನ್ನು ಈ ಹಿಂದೆ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ವಿಧಿಸಲಾಗಿತ್ತು. ಈ ಹಿಂದೆಯೂ ಅಧ್ಯಯನ ಪ್ರವಾಸದ ಬಗ್ಗೆ ಯಾವುದೇ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಕಾರ್ಪೋರೇಟರ್‌ಗಳು ನಮೂದಿಸಿಲ್ಲ. ಈಗಲಾದರೂ ಅಧ್ಯಯನ ಪ್ರವಾಸದ ಪ್ರಯೋಜನವನ್ನು ವೆಬ್‌ಸೈಟ್‌ನಲ್ಲಿ ಮಾಡುತ್ತಾರೆಯೇ ಎಂಬುದು ಕುತೂಹಲ ಹುಟ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net