

ಮೂರ್ತಿ ಟಿಸಿಎಸ್ ತಿಪಟೂರು
ಉತ್ತಮವಾಗಿ ಸಲು ಬರಲೆಂದು ಅತಿಹೆಚ್ಚು ಯೂರಿಯಾ ರಸಗೊಬ್ಬರ ಬಳಸಿದರೆ ರೈತರು ಲಾಭಕ್ಕಿಂತ ನಷ್ಟ ಅನುಭವಿಸುವುದು ಗ್ಯಾರಂಟಿ.
ಹೌದು, ಈ ಬಗ್ಗೆ ಕೃಷಿ ಇಲಾಖೆ ಎಚ್ಚರಿಕೆ ನೀಡಿದ್ದು, ಹೆಚ್ಚು ಯೂರಿಯಾ ರಸಗೊಬ್ಬರ ಬಳಕೆಯಿಂದ ರಾಗಿ ಬೆಳೆ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಮುಂಗಾರು ಉತ್ತಮವಾಗಿರುವುದರಿಂದ ತಾಲೂಕಿನ ಕೃಷಿಗೆ ಯೋಗ್ಯವಾದ ಒಟ್ಟು 50,722 ಹೆಕ್ಟೇರ್ನಷ್ಟಿದ್ದ ಭೂಮಿಯಲ್ಲಿ ರಾಗಿ ಬಿತ್ತನೆ ಪ್ರದೇಶ ವಿಸ್ತರಣೆಗೊಂಡಿದ್ದು, ಪ್ರಸ್ತುತ ಸುಮಾರು 23,000 ಹೆಕ್ಟೇರ್ನಲ್ಲಿ ರಾಗಿ ಬಿತ್ತಲಾಗಿದೆ.
ಹಿಂದಿನ ದಿನಗಳಲ್ಲಿ ರಾಗಿ ಬೆಳೆಯುವ ಹೊಲಗಳಲ್ಲಿ ಹೆಚ್ಚಾಗಿ ತಿಪ್ಪೆ ಅಥವಾ ಕೊಟ್ಟಿಗೆ ಗೊಬ್ಬರ ಹಾಕಲಾಗುತ್ತಿತ್ತು. ಆದರೆ, ಈ ಪದ್ಧತಿ ಕಾಲಕ್ರಮೇಣ ಮರೆಯಾಗಿದ್ದು, ಪ್ರಸ್ತುತ ದಿನಗಳಲ್ಲಿ ಸಾವಯವ ಗೊಬ್ಬರದ ಬಳಕೆಯೇ ಕ್ಣಿಣಿಸಿದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ ಬಳಕೆ ಮಾಡುತ್ತಿರುವ ಜತೆಗೆ ಕಳೆದ ಹದಿನೈದು ದಿನಗಳಿಂದ ಬಿಸಿಲು ಮತ್ತು ಮಳೆ ನಿಯಮಿತವಾಗಿ ಆಗುತ್ತಿರುವುದರಿಂದ ರಾಗಿ ಬೆಳೆಯಲ್ಲಿ ಬೆಂಕಿ ರೋಗ ಕಾಣಿಸಿಕೊಳ್ಳುವ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ ದಿನೇದಿನೆ ರಾಗಿ ಬೆಳೆ ರೋಗಕ್ಕೆ ತುತ್ತಾಗುತ್ತಿರುವ ಲಕ್ಷಣ ಗುರುತಿಸಲಾಗಿದೆ.
5 ಕೆಜಿ ಬದಲು 10ಕೆಜಿ ಬಳಕೆ: ಎಕರೆಗೆ 5 ಕೆಜಿ ಬದಲು 10ರಿಂದ 20 ಕೆಜಿ ಯೂರಿಯಾ ಗೊಬ್ಬರ ಬಳಸುತ್ತಿರುವುದು ರಾಗಿ ಪೈರಿಗೆ ಕಂಟಕವಾಗಲಿದೆ. ಮಿತಿಮೀರಿದ ಯೂರಿಯಾ ಬಳಕೆಯಿಂದ ರಾಗಿ ಗಿಡಗಳು ದಟ್ಟವಾಗಿ ಬೆಳೆಯುವುದಲ್ಲದೇ, ರೋಗಪೀಡಿತ ಪೈರುಗಳಿಂದ ಆರೋಗ್ಯಕರ ಪೈರಿಗೂ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ.
ಬೆಂಕಿರೋಗ ನಿಯಂತ್ರಣಕ್ಕೆ ಕ್ರಮ: ರಾಗಿಯಲ್ಲಿ ಬೆಂಕಿರೋಗ ಹತೋಟಿಗೆ ಪೈರು ದಟ್ಟವಾಗಿ ಬೆಳೆದಿರುವ ಕಡೆ ಬೆಳೆಯ ಸಾಂದ್ರತೆ ವಿರಳ ಮಾಡುವ ಮೂಲಕ ಮಣ್ಣಿನಲ್ಲಿ ಹೆಚ್ಚಿನ ತೇವಾಂಶವಿರದಂತೆ ನೋಡಿಕೊಳ್ಳುವುದು. ಯೂರಿಯಾ ಬಳಕೆ ಕಡಿಮೆ ಮಾಡುವುದು. ಜತೆಗೆ ರೋಗ ನಿಯಂತ್ರಣಕ್ಕಾಗಿ ಹೆಕ್ಸಾಕೊನಾಜೊಲ್ 1 ಮಿ. ಲೀ. ಅಥವಾ ಟೆಸೈಕ್ಲೋಜಾಲ್ 0.6 ಗ್ರಾಂ ಪ್ರತಿ ಲೀಟರ್ ಅಥವಾ ಟೆಬೂಕೊನಾಜಾಲ್ ಮತ್ತು ಟೆಫ್ಲೋಕ್ಸೀಸ್ಟೋಬಿನ್ 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣ ಸಿಂಪಡಣೆ ಮಾಡುವುದರಿಂದ ರಾಗಿ ಪೈರನ್ನು ರೋಗಗಳಿಂದ ರಕ್ಷಿಸಿಕೊಳ್ಳಬಹುದು.
19:19:19 ಹಾಗೂ 13:0:45 ಪೋಷಕಾಂಶಗಳನ್ನು ಒಂದು ಲೀಟರ್ ನೀರಿಗೆ 4 ಗ್ರಾಂ.ನಂತೆ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದು. ಸಮೃದ್ಧಿ ಲಘು ಪೋಷಕಾಂಶಗಳನ್ನು 5 ಮಿಲೀ/ಲೀ ಮಿಶ್ರಣ ಮಾಡಿ ಸಿಂಪಡಣೆ ಜತೆಗೆ ಮಣ್ಣಿನ ತೇವಾಂಶ ಆಧಾರಿಸಿ ಪ್ರತಿ ಎರಡು ವಾರಗಳಿಗೊಮ್ಮೆ ಪೋಷಕಾಂಶ ಸಿಂಪಡಣೆ ಮಾಡುವುದರಿಂದ ರಾಗಿ ಬೆಳೆಯಲ್ಲಿ ಬೆಂಕಿ ರೋಗ ತಡೆಗಟ್ಟಬಹುದು. ಮುಖ್ಯವಾಗಿ ರಿಯಾಯಿತಿ ದರದಲ್ಲಿ ಯೂರಿಯಾ ಸಿಗುತ್ತದೆ ಎಂಬ ಕಾರಣಕ್ಕೆ ಮಿತಿ ಮೀರಿದ ಬಳಕೆ ರಾಗಿ ಪೈರಿನ ಆರೋಗ್ಯಕ್ಕೆ ಮಾರಕ.| ಎಂ.ಪಿ. ಪವನ್ ಸಹಾಯಕ ಕೃಷಿ ನಿರ್ದೇಶಕ, ತಿಪಟೂರು ಮಿತಿಮೀರಿದ ಯೂರಿಯಾ ಬಳಕೆಯಿಂದ ರಾಗಿ ಗಿಡದ ಕಾಂಡ ಸದೃಢವಾಗಿ ಬೆಳೆದು ಹಚ್ಚ ಹಸಿರಾಗಿ ಕಾಣಿಸುತ್ತದೆ. ಇದರಿಂದ ಗಿಡದ ಬೇರು ಬಲಿತು ಹೆಚ್ಚು ಕಾಳು ನಿಲ್ಲುವುದಿಲ್ಲ. ಸ್ವಲ್ಪ ಗಾಳಿ ಬೀಸಿದರೂ ಗಿಡ ನೆಲ ಕಚ್ಚುವ ಸಾಧ್ಯತೆ ಇರುತ್ತದೆ. ಹೆಚ್ಚು ಯೂರಿಯಾ ಬಳಕೆಯಿಂದ ಗಿಡ ಹಸಿರಾಗಿ ಬೆಳೆಯು ಹಾನಿಕಾರಕ ಕೀಟಗಳ ಆಕರ್ಷಣೆಗೂ ಕಾರಣವಾಗುತ್ತದೆ.| ಹೆಸರು ಹೇಳಲಿಚ್ಛಿಸದ ರಸಗೊಬ್ಬರ ವ್ಯಾಪಾರಿ