

ಶಿರಸಿ: ಇಲ್ಲಿನ ಅರ್ಬನ್ ಸಹಕಾರಿ ಬ್ಯಾಂಕ್ ತನ್ನ ಸಾಧನೆಯ ನಾಗಾಲೋಟ ಮುಂದುವರಿಸಿದೆ. ಬ್ಯಾಂಕ್‌ನ ಒಟ್ಟು ವ್ಯವಹಾರ 2 ಸಾವಿರ ಕೋಟಿ ರೂ. ದಾಟುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕ್‌ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷ ಜಯದೇವ ನೀಲೇಕಣಿ, ಪ್ರಸಕ್ತ ಸಾಲಿನಲ್ಲಿ 4 ಹೊಸ ಶಾಖೆಗಳನ್ನು ಸಿದ್ದಾಪುರ, ಧಾರವಾಡ, ಗದಗ ಹಾಗೂ ಮಂಗಳೂರಿನಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಕಳೆದ ವರ್ಷ ಕುಂದಾಪುರ ಹಾಗೂ ಹಾವೇರಿಯಲ್ಲಿ 2 ಹೊಸ ಶಾಖೆಗಳನ್ನು ತೆರೆದಿದ್ದು, ಈ ವರ್ಷ 4 ಹೊಸ ಶಾಖೆಗಳನ್ನು ಪ್ರಾರಂಭಿಸುವುದರೊಂದಿಗೆ ಬ್ಯಾಂಕ್‌ನ ಒಟ್ಟು ಶಾಖೆಗಳ ಸಂಖ್ಯೆ 18 ರಿಂದ 22ಕ್ಕೆ ಏರಲಿದೆ. ಆರ್ಥಿಕ ವರ್ಷದಲ್ಲಿ ಶಿರಸಿ ಅರ್ಬನ್ ಬ್ಯಾಂಕ್ ತನ್ನ ಒಟ್ಟು ಠೇವಣಿಯನ್ನು 1245 ಕೋಟಿ ರೂ.ಗಳಿಗೆ, ದುಡಿಯುವ ಬಂಡವಾಳವನ್ನು 1453 ಕೋಟಿ ರೂ.ಗಳಿಗೆ ಹೆಚ್ಚಿಸುವುದರೊಂದಿಗೆ 10.29 ಕೋಟಿ ರೂ. ನಿವ್ಹಳ ಲಾಭ ದಾಖಲಿಸಿದೆ ಎಂದರು.
ಬ್ಯಾಂಕ್‌ನ ಸದಸ್ಯರ ಸಂಖ್ಯೆ 47,000 ದಾಟಿದ್ದು, ಸಂದಾಯಿತ ಷೇರು ಬಂಡವಾಳ 34.12 ಕೋಟಿ ರೂ. ತಲುಪಿದೆ. ಕಳೆದ ವರ್ಷದ 98.56 ಕೋಟಿ ರೂ. ಆದಾಯವನ್ನು ಈ ವರ್ಷ 116.82 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಂಡಿದೆ. ಈ ಆರ್ಥಿಕ ವರ್ಷದಲ್ಲಿಯೂ ಬ್ಯಾಂಕ್‌ನ ನಿಕ್ಕಿ ಅನುತ್ಪಾದಕ ಆಸ್ತಿಗಳ ಪ್ರಮಾಣವು ಸೊನ್ನೆ ಪ್ರತಿಶತ ಇದೆ. ಬ್ಯಾಂಕ್ ಕಳೆದ 5 ವರ್ಷಗಳಲ್ಲಿ ತನ್ನ ವ್ಯವಹಾರವನ್ನು 1176 ಕೋಟಿ ರೂ. ಗಳಿಂದ 2055 ಕೋಟಿ ರೂ.ಗಳಿಗೆ ಅಭಿವೃದ್ಧಿಗೊಳಿಸಿರುವುದು ಬ್ಯಾಂಕ್ ಸದೃಢವಾಗಿ ಪ್ರಗತಿಯತ್ತ ಸಾಗುವ ಸಂಕೇತವಾಗಿದೆ ಎಂದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್, ಜಯದೇವ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಗಮನಾರ್ಹ ಕಾರ್ಯನಿರ್ವಹಣೆ ತೋರುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ಬ್ಯಾಂಕಿನ ಶಿರಸಿ ಪ್ರಧಾನ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯನ್ನು ಸಭೆಯಲ್ಲಿ ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಲಾಯಿತು.
ವಾರ್ಷಿಕ ಸರ್ವಸಾಧಾರಣ ಸಭೆಯ ಅಂಗವಾಗಿ ಪ್ರತಿ ವರ್ಷದಂತೆ ಹಿರಿಯ ಸದಸ್ಯರನ್ನು ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ, ಪದವಿ/ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯಕ್ಕೆ ರ‌್ಯಾಂಕ್ ಪಡೆದ ಬ್ಯಾಂಕಿನ ಸದಸ್ಯರ 76 ಮಕ್ಕಳಿಗೆ ಒಟ್ಟ್ಟು 2.30 ಲಕ್ಷ ರೂ. ಮೊತ್ತದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬ್ಯಾಂಕ್ ಉಪಾಧ್ಯಕ್ಷ ಸಂತೋಷ ಪಂಡಿತ, ನಿರ್ದೇಶಕರು ಇದ್ದರು. ಸದಾನಂದ ನಾಯ್ಕ ಆಭಾರ ಮನ್ನಣೆ ನಿರ್ವಹಿಸಿದರು. ನಿರ್ದೇಶಕ ಪ್ರೊ. ಕೆ.ಎನ್. ಹೊಸಮನಿ ಪರಿಚಯ ಮಾಡಿದರು.
119 ವರ್ಷಗಳ ಇತಿಹಾಸ ಹೊಂದಿರುವ ದಿ. ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್, ಸಹಕಾರ ತತ್ವದಡಿ ಶತಮಾನಗಳಷ್ಟು ಹಿರಿಯ ಸಂಪ್ರದಾಯ ಹೊಂದಿದೆ. ಭಾರತದ ಭೂಪಟದಲ್ಲಿ ಅತ್ಯುನ್ನತ ಸಹಕಾರಿ ಬ್ಯಾಂಕ್ ಎಂದು ಗುರುತಿಸುವ ಸಂಕಲ್ಪ ಹೊಂದಿದೆ.> ಜಯದೇವ ಯು. ನಿಲೇಕಣಿ ಅಧ್ಯಕ್ಷ