

ವಿಜಯವಾಣಿ ಸುದ್ದಿಜಾಲ ಗದಗ
ಲಿಂಗಾಯತ ಮೀಸಲಾತಿ ಅಸಾಧ್ಯ. ಇದು ಬಸತತ್ವದ ವಿರುದ್ಧದ ಪ್ರಕ್ರಿಯೆ. ಇನ್ನೂ ನೂರು ವರ್ಷ ಕಳೆದರೂ ಲಿಂಗಾಯತರಿಗೆ ಮೀಸಲಾತಿ ದೊರೆಯಲು ಸಾಧ್ಯವಿಲ್ಲ ಎಂದು ನಿವೃತ್ತ ಐ.ಎ.ಎಸ್. ಅಧಿಕಾರಿ ಎಸ್.ಎಂ. ಜಾಮದಾರ ಹೇಳಿದರು.
ಜಿಲ್ಲೆಯ ತೋಂಟದಾರ್ಯ ಮಠದ ಆವರಣದಲ್ಲಿ ಬುಧವಾರ ಜರುಗಿದ ತೋಂಟದ ಸಿದ್ಧಲಿಂಗ ಶ್ರೀಗಳ 5ನೇ ಪುಣ್ಯ ಸ್ಪರಣೆ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ತೋಂಟದ ಶ್ರೀಗಳ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮೀಸಲಾತಿ ಪ್ರಕ್ರಿಯೆಗೆ 104 ವರ್ಷಗಳ ಇತಿಹಾಸವಿದೆ. 1919ರಲ್ಲಿ ಮಿಲ್ಲರ್ ಕಮಿಷನ್, 1958 ನಾಗನಗೌಡ ಕಮಿಷನ್, ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ, ರವಿವರ್ಮ ಕುಮಾರ ಆಯೋಗ ಸೇರಿದಂತೆ 6 ಆಯೋಗಗಳ ವರದಿ ಸರ್ಕಾಕ್ಕೆ ಸಲ್ಲಿಕೆ ಆಗಿವೆ. ಈ ವರದಿಗಳನ್ನು ರಾಜಕೀಯ ನಾಯಕರು, ಲಿಂಗಾಯತ ಮಠಾಧೀಶರು ಓದಿಕೊಳ್ಳಬೇಕು. ವರದಿ ಅರ್ಥವಾದರೆ ತಾವುಗಳು ಹೇಳುತ್ತಿರುವುದು ಸತ್ಯಕ್ಕೆ ದೂರ ಎಂಬದು ನಿಮಗೆ(ರಾಜಕಾರಣಿಗಳು, ಮಠಾಧೀಶರು) ಅರ್ಥವಾಗುತ್ತದೆ. ವರದಿಗಳನ್ನು ಅರ್ಥೈಸಿಕೊಂಡವರು ಯಾರು ಲಿಂಗಾಯತರಿಗೆ ಮೀಸಲಾತಿ ಕೊಡಿಸಲ ಸಾಧ್ಯವೇ ಇಲ್ಲ ಎಂದರು.
ಜಾತಿ ವ್ಯವಸ್ಥೆ ವಿರುದ್ಧ ಬಸವಣ್ಣ ಹೋರಾಡಿದ್ದರು. ಬ್ರಾಹ್ಮಣರನ್ನು ಒಳಗೊಂಡು ಹಲವರು ಬಸತತ್ವ ಒಪ್ಪಿ ಬಂದಿದ್ದಾರೆ. ಈಗ ಪ್ರತ್ಯೇಖ ಜಾತಿಗಾಗಿ, ರಾಜಕಾರಣಕ್ಕಾಗಿ ಮೀಸಲಾತಿ ಹೋರಾಟ ನಡೆದಿದೆ. ರಾಜಕೀಯ ಶಕ್ತಿಗಳು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. "ವರ್ಗ'ಗಳಿಗೆ(ಒಬಿಸಿ) ಸೀಮಿತವಾದ ಮೀಸಲಾತಿಗಳು ಜಾತಿಗೆ ಸಂಬಂಧಿರುವುದಿಲ್ಲ. ವರ್ಗವೇ ಬೇರೆ, ಜಾತಿಯೇ ಬೇರೆ, ಧರ್ಮವೇ ಬೇರೆ. ಇದೇ ಸತ್ಯ. ಲಿಂಗಾಯತರು ರಾಜಕೀಯವಾಗಿ ಒಗ್ಗೂಡುವ ಅಗತ್ಯತೆಗಿಂತ ಬದುಕಿನ ಆದರ್ಶಕ್ಕಾಗಿ ಒಂದಾಗಬೇಕು ಎಂದರು.