

ಗದಗ: ವಚನಸಾಹಿತ್ಯವನ್ನು ೧೨ ನೇ ಶತಮಾನದಲ್ಲಿ ಬಸವಾದಿ ಶಿವಶರಣರು ರಚಿಸಿದರು. ತದನಂತರ ಆ ಸಾಹಿತ್ಯವನ್ನು ೧೫ ನೇ ಶತಮಾನದಲ್ಲಿ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು ೭೦೧ ವಿರಕ್ತರು ಕೂಡಿಕೊಂಡು ವಚನಗಳನ್ನು ಸಂಗ್ರಹಿಸಿ, ಸಂಕಲಿಸಿ, ಸಂಪಾದಿಸಿ ವಚನ ಸಾಹಿತ್ಯಕ್ಕೆ ವಿಸ್ತಾರೋನ್ನತ ರೂಪವನ್ನು ಕೊಟ್ಟಿದ್ದಾರೆ. ವಚನ ಸಾಹಿತ್ಯ ಬಹಳ ಅತ್ಯಮೂಲ್ಯವಾಗಿರುವ ಸಾಹಿತ್ಯ ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೬೫೮ ನೆಯ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ೨೦ ನೇ ಶತಮಾನದಲ್ಲಿ ಈ ಮೌಲಿಕವಾದ ವಚನಸಾಹಿತ್ಯವನ್ನು ಸಂಗ್ರಹಿಸಿ, ಸಂಶೋಧನೆ ಮಾಡಿ ನಾಡಿಗೆ ಪರಿಚಯಿಸಿಕೊಟ್ಟ ಶ್ರೇಯಸ್ಸು ಡಾ. ಫ. ಗು. ಹಳಕಟ್ಟಿಯವರದು. ಅನೇಕ ಸವಾಲು, ಕಷ್ಟದ ಸನ್ನಿವೇಶಗಳಲ್ಲಿಯೂ ಹಳಕಟ್ಟಿಯವರು ವಚನಸಾಹಿತ್ಯವನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಅವರು ವಚನ ಪಿತಾಮಹರೆಂದೇ ಖ್ಯಾತರಾಗಿದ್ದಾರೆ. ಹೆಸರಾಂತ ಸಂಶೋಧಕರಾದ ಡಾ. ಎಂ. ಎಂ. ಕಲಬುರ್ಗಿಯವರು ತಮ್ಮ ಶಿಷ್ಯರ ಜೊತೆಗೂಡಿ ಕರ್ನಾಟಕ ಸರಕಾರದಿಂದ ಸಮಗ್ರ ವಚನ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಿ ಮನೆಮನೆಗೆ ತಲುಪಿಸಿದ್ದಾರೆ. ನಮ್ಮ ಗುರುಗಳಾದ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರಿಗೆ ಮತ್ತು ಅನೇಕ ಮಠಮಾನ್ಯಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಸಂಶೋಧನ ಕ್ಷೇತ್ರದಲ್ಲಿ ಸಾಕಷ್ಟು ಶಿಷ್ಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ ಎಂದರು.
ಮುಂದುವರೆದು ಮಾತನಾಡಿದ ಶ್ರೀಗಳು, ಬಸವಾದಿ ಶಿವಶರಣರು ಕಾಯಕಕ್ಕೆ ತಕ್ಕಷ್ಟೆ ಪ್ರತಿಫಲ ಪಡೆಯಬೇಕು, ಹೆಚ್ಚಿನದನ್ನು ಪಡೆಯಬೇಕೆಂಬ ಆಸೆ ತರವಲ್ಲ ಎಂದು ತಿಳಿಸಿಕೊಟ್ಟಿದ್ದಾರೆ. ಶರಣರೂ ಸಹಿತ ನ್ಯಾಯ, ನೀತಿ, ಧರ್ಮದ ಚೌಕಟ್ಟಿನಲ್ಲಿಯೇ ನಡೆದಿದ್ದಾರೆ. ಶರಣರ ನಡೆ, ನುಡಿ, ಆದರ್ಶಗಳನ್ನು ಬದುಕಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಶಾಂತಕುಮಾರ ಭಜಂತ್ರಿ ಅಧ್ಯಕ್ಷರು, ಜಾನಪದ ಪರಿಷತ್ತು ಗದಗ ಜಿಲ್ಲೆ ಉಪನ್ಯಾಸ ನೀಡಿ, ೧೨ ನೇ ಶತಮಾನ ಬಹಳ ವೈಶಿಷ್ಟö್ಯಪೂರ್ಣತೆಯಿಂದ ಕೂಡಿದ ಶತಮಾನ. ಶರಣ ಶರಣೆಯರು ವಚನಗಳನ್ನು ರಚಿಸುವ ಮೂಲಕ ನಾಡಿಗೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ. ನುಲಿಯ ಚಂದಯ್ಯನವರು ಕಾಯಕ-ದಾಸೋಹದ ಮೂಲಕ ಪ್ರಸಿದ್ಧಿಯನ್ನು ಹೊಂದಿದ್ದಾರೆ. ೧೨ ನೇ ಶತಮಾನದ ಶರಣರಲ್ಲಿ ನುಲಿಯ ಚಂದಯ್ಯನವರೂ ಒಬ್ಬರು ಎಂದು ತಿಳಿಸಿದರು.
ಡಾ. ಶರಣಬಸವ ವೆಂಕಟಾಪೂರ ವಿಶ್ರಾಂತ ಪ್ರಾಧ್ಯಾಪಕರು ಹೊಸಹಳ್ಳಿ ಅವರು ಮಾತನಾಡಿ, ಈ ಶತಮಾನದ ಎಲ್ಲ ಕ್ಷೇತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಅವುಗಳನ್ನು ದಾಖಲು ಮಾಡಿದ ಸಮರ್ಥ ಸಂಶೋಧಕರು ಡಾ. ಎಂ. ಎಂ. ಕಲಬುರ್ಗಿಯವರು. ಬಸವಾದಿ ಶಿವಶರಣರ ತತ್ತ÷್ವಸಿದ್ಧಾಂತಗಳಿಗೆ ಬದ್ಧರಾಗಿದ್ದರು. ಇವರು ನಮ್ಮ ನಾಡು ಕಂಡ ಶ್ರೇಷ್ಠ ಸಾಹಿತಿಗಳು, ಸಂಶೋಧಕರು, ವಿದ್ವಾಂಸಕರಲ್ಲಿ ಒಬ್ಬರು. ಬಹಳಷ್ಟು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಸಾಹಿತಿಗಳಿಗೆ ಮಾರ್ಗದರ್ಶನ ಮಾಡಿದ ಹಿರಿಮೆ ಕಲಬುರ್ಗಿ ಅವರದು ಎಂದು ತಿಳಿಸಿದರು.
ನುಲಿಯ ಚಂದಯ್ಯನವರ ಜಯಂತಿ ಹಾಗೂ ಡಾ. ಎಂ. ಎಂ. ಕಲಬುರ್ಗಿ ಅವರ ಸ್ಮರಣೆ ಮಾಡಲಾಯಿತು. ಶರಣೆ ಮಾತೋಶ್ರೀ ಪೂಜ್ಯ ಕಮಲಮ್ಮತಾಯಿ, ಆಧ್ಯಾತ್ಮ ಆಶ್ರಮ ಹಳೇ ಹುಬ್ಬಳ್ಳಿ ಅವರಿಂದ ಪ್ರವಚನ ಜರುಗಿತು.
ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಧಾರವಾಡ ಇಲ್ಲಿಗೆ ಸಿಂಡಿಕೇಟ್ ಸದಸ್ಯರಾದ ಮೋಹನ ಎಚ್. ಭಜಂತ್ರಿ, ನ್ಯಾಯವಾದಿಗಳು ಗದಗ ಅವರು ಸಂಮಾನ ಸ್ವೀಕರಿಸಿ ಮಾತನಾಡಿದರು. ಆದರ್ಶ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶ್ರೀ ವಿವೇಕಾನಂದ ಪಾಟೀಲ ಅವರನ್ನು ಸಂಮಾನಿಸಲಾಯಿತು.
ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಕು. ಪ್ರಣವಿ ಬಿ. ಅಣ್ಣಿಗೇರಿ ಧರ್ಮಗ್ರಂಥ ಪಠಣಗೈದರು, ಕು ಸುಚಿತ ಬಿ. ಬಳಬಟ್ಟಿ ಇವರಿಂದ ವಚನ ಚಿಂತನ ನಡೆಯಿತು. ಶಿವಾನುಭವ ಭಕ್ತಿಸೇವೆಯನ್ನು ಡಾ. ಎ. ಎಸ್. ಅಕ್ಕಮಹಾದೇವಿ ಹಾಗೂ ಕುಟುಂಬ ಹುಬ್ಬಳ್ಳಿ, ಲಿಂ. ಚನ್ನಮ್ಮ ಶಂಕ್ರಪ್ಪ ಚಳ್ಳಮರದ ಅವರ ಸ್ಮರಣಾರ್ಥ ಕುಟುಂಬವರ್ಗ, ಡಾ. ಎಸ್. ಬಿ. ಶೆಟ್ಟರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜಾತ್ರಾ ಮಹೋತ್ಸವ ಸಮಿತಿ ೨೦೨೩ ಇವರನ್ನು ಶ್ರೀಗಳು ಸನ್ಮಾನಿಸಿದರು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ವಿವೇಕಾನಂದಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ರತ್ನಕ್ಕ ಪಾಟೀಲ ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.