

ಗದಗ : ಶ್ರಾವಣ ಮಾಸ ಎಂದರೆ ಶ್ರವಣಕ್ಕೆ ಮೀಸಲಾಗಿರುವಂತಹ ಮಾಸ. ಸ್ವಚ್ಚ ಮನಸ್ಸಿನಲ್ಲಿ ಮಾತ್ರ ಶಾಂತಿ, ನೆಮ್ಮದಿ, ಸಮಾಧಾನ ಕಾಣಲು ಸಾಧ್ಯ. ಮನಸನ್ನು ಸ್ವಚ್ಚಗೊಳಿಸಲು ಶರಣರ ಅನುಭಾವದ ನುಡಿಗಳನ್ನು ಕೇಳಬೇಕು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೦೫ನೆಯ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ೧೨ ನೇ ಶತಮಾನದ ಪೂರ್ವದಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ಧಾರ್ಮಿಕ ಸ್ವಾತಂತ್ರö್ಯ ಇರಲಿಲ್ಲ. ಹೆಣ್ಣುಮಕ್ಕಳಿಗೆ ಮೊಟ್ಟಮೊದಲು ಧಾರ್ಮಿಕ ಸ್ವಾತಂತ್ರವನ್ನು ಕಲ್ಪಿಸಿದವರು ಬಸವಾದಿ ಶಿವಶರಣರು. ಶರಣರ ಸಂಗದಲ್ಲಿದ್ದು ಅನುಭವಮಂಟಪದ ಚಟುವಟಿಕೆಗಳಲ್ಲಿ ಭಾಗಿಯಾಗಿ, ಅನುಭಾವಿಗಳಾಗಿ ಹೆಣ್ಣುಮಕ್ಕಳು ಸಹಿತ ಮಿಂಚಿದ್ದಾರೆ. ೫೦ ಕ್ಕಿಂತಲೂ ಹೆಚ್ಚು ಹೆಣ್ಣುಮಕ್ಕಳು ಅತ್ಯಂತ ಮೌಲಿಕವಾಗಿರುವಂತಹ ವಚನಗಳನ್ನು ಬರೆದಿದ್ದಾರೆ. ಲಿಂಗೈಕ್ಯ ಇಲ್ಲಕಲ್ಲ ಮಹಾಂತಪ್ಪಗಳವರು ಬದುಕಿನುದ್ದಕ್ಕೂ ಸಮಾಜದಲ್ಲಿರುವ ದುಶ್ಚಟಗಳನ್ನು, ದುರ್ವ್ಯಶನಗಳನ್ನು, ದುರಾಚಾರಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಜನರನ್ನು ಸದಾಚಾರಿಗಳನ್ನಾಗಿ, ಸದ್ಗುಣಿಗಳನ್ನಾಗಿ ಪರಿವರ್ತನೆ ಮಾಡಿದ್ದಾರೆ ಎಂದು ಶ್ರೀಗಳು ಸ್ಮರಿಸಿದರು.
ಗಿರಿಜಕ್ಕ ಧರ್ಮರೆಡ್ಡಿ ಅವರು ಪ್ರವಚನ ನೀಡಿ, ಸತ್ಯ ಮತ್ತು ದೇವರು ಒಂದು ನಾಣ್ಯದ ಎರಡು ಮುಖಗಳು. ಶಿವನನ್ನು ಪೌರಾಣಿಕ ಶಿವ, ಯೋಗಿ ಶಿವ, ಪರಶಿವ ಮೂರು ರೀತಿಯಲ್ಲಿ ನೋಡುತ್ತೇವೆ. ಶರಣರು, ಎಲ್ಲಾ ಮಹಾತ್ಮರು ಹೇಳಿರುವುದು ಒಂದೇ ಪರಶಿವ, ನಿರಾಕಾರ ಪರಮಾತ್ಮ. ಪರಶಿವ ಕಣ್ಣಿಗೆ ಕಾಣಿಸುವುದಿಲ್ಲ, ಕೈಗೆ ಸಿಗುವುದಿಲ್ಲ. ಸತ್ಯಂ ಶಾಶ್ವತಂ ಅನಂತA. ಶಿವ ಅಂದರೆ ಮಂಗಲಕರ, ಕಲ್ಯಾಣಕರ, ಸತ್ಯ, ಶಾಶ್ವತ, ಅನಂತ ಎಂದು ಮಾತನಾಡಿದರು.
‘ವ್ಯಸನಗಳು : ವ್ಯಕ್ತಿಯ ಮಾನಸಿಕ-ದೈಹಿಕ ಆರೋಗ್ಯ’ ವಿಷಯ ಕುರಿತು ಡಾ. ಅರವಿಂದ ಕರಿನಾಗಣ್ಣನವರ ವೈದ್ಯರು, ಜಿಲ್ಲಾ ವೈದ್ಯಕೀಯ ಸಂಸ್ಥೆ, (ಜೀಮ್ಸ್) ಉಪನ್ಯಾಸ ನೀಡಿ, ಡಾ. ಮಹಾಂತ ಸ್ವಾಮಿಗಳು ೮೦೦೦ ಹಳ್ಳಿಗಳಿಗೆ ಭೇಟಿ ನೀಡಿ ತಮ್ಮ ಜೋಳಿಗೆಗೆ ದುಶ್ಚಟಗಳನ್ನು ಹಾಕಿಸಿಕೊಂಡು ಜನರನ್ನು ವ್ಯಸನಮುಕ್ತನ್ನಾಗಿಸಿದ್ದಾರೆ. ಒಬ್ಬ ಒಳ್ಳೆಯ ಸ್ನೇಹಿತ ಗ್ರಂಥಾಲಯಕ್ಕೆ ಸಮ. ಮಕ್ಕಳು ಒಳ್ಳೆಯ ಸ್ನೇಹಿತರ ಸಂಗದಲ್ಲಿರಬೇಕು. ಮಕ್ಕಳಲ್ಲಿ ದುಶ್ಚಟಗಳು ಹೆಚ್ಚಾಗಲು ಕೆಟ್ಟ ಸ್ನೇಹಿತರ ಸಂಗ, ಮೊಬೈಲ್, ಚಲನಚಿತ್ರ ನಟರು, ಪರಿಸರ, ಪ್ಯಾಶನ್ ಕಾರಣ. ಪಾಲಕರು ಸಹಿತ ಮಕ್ಕಳ ಚಲನವಲನದ ಮೇಲೆ ಗಮನ ಇಡಬೇಕು ಎಂದು ಮಾತನಾಡಿದರು.
ಎಂ.ಎ. ರಡ್ಡೇರ ಅವರು ಮಾತನಾಡಿ, ಶಿಕ್ಷಣವನ್ನು ಜೀವಿಸುವ ಹಕ್ಕಿನಲ್ಲಿ ಸೇರಿಸಿದ್ದಾರೆ. ಜೀವಿಸಬೇಕಾದರೆ ಅಣ್ಣ, ಗಾಳಿ, ನೀರು, ಸೂರು ಎಷ್ಟು ಮುಖ್ಯವೋ ಶಿಕ್ಷಣವು ಅಷ್ಟೇ ಮುಖ್ಯ. ಬದುಕುವುದಾದರೆ ಶಿಕ್ಷಣ ಪಡೆದು ಬದುಕಬೇಕು ಎಂದು ಮಾತನಾಡಿದರು
ಪೂಜ್ಯ ಲಿಂ. ಡಾ. ಮಹಾಂತ ಮಹಾಸ್ವಾಮಿಗಳು ಇಳಕಲ್ಲ ಇವರ ೯೪ ನೇ ಜನ್ಮದಿನದ ಅಂಗವಾಗಿ ‘ವ್ಯಸನಮುಕ್ತ ದಿನಾಚರಣೆ’ ಯನ್ನು ಆಚರಿಸಲಾಯಿತು. ಪೂಜ್ಯ ಶ್ರೀ ಹರ್ಲಾಪೂರ ದೇವರು ಸಮ್ಮುಖ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಿಮಿತ್ತ ಎಂ.ಎ. ರಡ್ಡೇರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುರೇಶ ಕುಂಬಾರ, ಎಸ್.ಕೆ.ವಿ.ಪಿ. ಪದವಿ ಕಾಲೇಜು ಹೊಳೆಆಲೂರದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡಾ. ಪ್ರಭು ಗಂಜಿಹಾಳ ಅವರನ್ನು ಸಂಮಾನಿಸಲಾಯಿತು.
ಮೃತ್ಯುಂಜಯ ಹಿರೇಮಠ ಹಾಗೂ ಶ್ರೀ ಗುರುನಾಥ ಸುತಾರ ಸಂಗಡಿಗರು ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಕು. ಚಂದ್ರಿಕಾ ಎಂ. ಹೊಂಬಳ, ವಚನ ಚಿಂತನೆಯನ್ನು ಕು. ಲಕ್ಷಿö್ಮ ವಿ. ಪಟ್ಟಣ ಅವರು ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಮಲ್ಲಿಕಾರ್ಜುನ ಬ. ಸುರಕೋಡ, ಶ್ರೀಮತಿ ವಿದ್ಯಾ ಬ. ಸುರಕೋಡ, ಅಣ್ಣಿಗೇರಿ ಇವರ ಸುಪುತ್ರ ಪ್ರಜ್ವಲ ಹಾಗೂ ಶ್ರೀಮತಿ ಕೀರ್ತಿ ಅವರನ್ನು ಪೂಜ್ಯರು ಸಂಮಾನಿಸಿದರು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.