

ಗದಗ: ತಾಲೂಕಿನ ನಾಗಾವಿ ಗ್ರಾಮದ ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನದಿಂದ ಗದಗನ ಲಕ್ಷ್ಮಣಸಾ ನಗರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ 2024ನೇ ಹೊಸ ವರ್ಷದ ದಿನದರ್ಶಿಕೆಯನ್ನು ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು.
ಗದಗ ನಗರಕ್ಕೆ ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಯವರು ದಯಮಾಡಿಸಿ ಹತ್ತು ದಿನಗಳ ಪರ್ಯಂತ ಭಕ್ತ ಜನತೆಗೆ ಐತಿಹಾಸಿಕ ಅವಿಸ್ಮರಣೀಯ. ಆಧ್ಯಾತ್ಮ ಪ್ರವಚನದ ಮೂಲಕ ಜ್ಞಾನದ ಬುತ್ತಿ ಉಣ ಬಡಿಸಿ ಸರ್ವರೂ ಸೌಹಾರ್ದತೆಯಿಂದ ಬಾಳಲು ಸದ್ಭಾವನಾ ಪಾದಯಾತ್ರೆ ಮೂಲಕ ಸಂದೇಶ ನೀಡಿರುವುದು ಸ್ಮರಣಾರ್ಹವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಗದಗ ಬೆಟಗೇರಿ ನಗರಸಭೆಯ ಕ್ರಿಯಾಶೀಲ ಅಧ್ಯಕ್ಷರಾದ ಶ್ರೀಮತಿ ಉಷಾ ಮಹೇಶ ದಾಸರ, ಬಿಜೆಪಿ ಯುವ ಮುಖಂಡರಾದ ಮಹೇಶ ದಾಸರ ಅವರ ನೂತನ ಗೃಹಪ್ರವೇಶದ ಸವಿನೆನಪಿಗಾಗಿ ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನ ವತಿಯಿಂದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯವರ ಪ್ರಸನ್ನತೆಯ ಭಾವಚಿತ್ರವಿರುವ 2024ನೇ ಹೊಸ ವರ್ಷದ ದಿನದರ್ಶಿಕೆ ಹಾಗೂ ಪೂಜಾ ಅರ್ಹ ಸಸಿಗಳನ್ನು ವಿತರಣೆ ಮಾಡಿರುವುದು ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನದ ಕಾರ್ಯ ಮಾದರಿ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ನೂತನ ಗೃಹಪ್ರವೇಶಕ್ಕೆ ಆಗಮಿಸಿದ್ದ ಪೂಜ್ಯರು ಹಾಗೂ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸೇರಿದಂತೆ ಸಾವಿರಾರು ಆತ್ಮೀಯರಿಗೆ ದಿನದರ್ಶಿಕೆಗಳನ್ನು, ಹೂವು, ಹಣ್ಣು ಸಸಿಗಳನ್ನು ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಉಷಾ ಮಹೇಶ್ ದಾಸರ, ಬಿಜೆಪಿ ಮುಖಂಡರಾದ ಮಹೇಶ ದಾಸರ ಹಾಗೂ ಪ್ರತಿಷ್ಠಾನದ ಸದಸ್ಯರುಗಳು ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಚಂದ್ರು ತಡಸದ, ಮುತ್ತಣ್ಣ ಮುಸಿಗೇರಿ, ಕರ್ನಾಟಕ ರಕ್ಷಣಾ ವೇದಿಕೆಯ ವೆಂಕಟೇಶ ಬೇಲೂರು, ಸುನಿಲ ಕುಲಕರ್ಣಿ, ಧೀರಜ್ ನಂದಿಕೋಲಮಠ, ಬಸವರಾಜ ಈಟಿ ಹಾಗೂ ದಾಸರ ಕುಟುಂಬದ ಪರಿವಾರದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷರಾದ ಬಸವಣ್ಣೆಯ್ಯ ಹಿರೇಮಠ ಸ್ವಾಗತಿಸಿ, ವಂದಿಸಿದರು.