ತ್ಯಾಗ ಗುಣಗಳಿಂದ ಅಮರತ್ವ ಪ್ರಾಪ್ತಿ: ತೋಂಟದ ಶ್ರೀ

06GDG01
Published on

ಗದಗ: ಜೀವನದಲ್ಲಿ ತ್ಯಾಗ ಗುಣಗಳಿಂದ ಅಮರತ್ವ ಪ್ರಾಪ್ತಿಯಾಗುವದು. ಶಿಕ್ಷಣ ಪ್ರೇಮಿ, ತ್ಯಾಗಜೀವಿಯಾಗಿದ್ದ ದಿ. ಬಿ.ಜಿ.ಅಣ್ಣಿಗೇರಿ ಗುರುಗಳು ಅಂತಹ ಗುಣಗಳನ್ನು ಹೊಂದಿದ್ದರು ಎಂದು ಗದುಗಿನ ತೋಂಟದಾರ್ಯ ಮಠದ ಜ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಗದುಗಿನ ಬಿ.ಜಿ.ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎರ್ಪಡಿಸಿದ್ದ ಬಿ.ಜಿ.ಅಣ್ಣಿಗೇರಿ ಗುರುಗಳ ೪ನೇ ಪುಣ್ಯಸ್ಮರಣೆ ಸಮಾರಂಭ ಮತ್ತು ವಾರ್ಷಿಕ ಸರ್ವಸಾಧಾರಣ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಬಡ ಹಾಗೂ ಪರ ಊರಿನ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ಅವರ ಶಿಕ್ಷಣಕ್ಕೆ ನೆರವಾದವರು ಅಣ್ಣಿಗೇರಿ ಗುರುಗಳು. ಅವರ ಸಾವಿರಾರು ಶಿಷ್ಯರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ ಎಂದರು ಬಣ್ಣಿಸಿದರಲ್ಲದೆ ಬಿ.ಜಿ.ಅಣ್ಣಿಗೇರಿ ಗುರುಕುಲ ಆಶ್ರಮದ ಪದ್ಧತಿ ಅವರ ಅಗಲುವಿಕೆಯ ನಂತರದಲ್ಲಿಯೂ ಅಭಿವೃದ್ಧಿಯೊಂದಿಗೆ ಮುಂದುವರೆದಿರುವದು ಶ್ಲಾö್ಯಘನೀಯ ಎಂದರು.
ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸುವಲ್ಲಿ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಕ್ರಿಯಾಶೀಲತೆಯಿಂದ ಕಾರ್ಯ ಮಾಡುತ್ತಿರುವದು ಅಭಿನಂದನೀಯ. ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳು ಸಹಕಾರ ಮತ್ತು ಸೇವಾಮನೋಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ ಈ ಕೈಂಕರ್ಯ ಹೀಗೆ ಮುಂದುವರೆಯಲಿ ಎಂದರು.
ಕ್ಷರ ಎಂದರೆ ನಾಶ, ಅಕ್ಷರ ಎಂದರೆ ನಾಶ ಆಗಲಾರದ್ದು ಎಂದರ್ಥ. ಇಂತಹ ಅಕ್ಷರಗಳ ಶಿಕ್ಷಣ ನೀಡುವ ಮೂಲಕ ನಾಶ ಆಗಲಾರದ ಶಾಸ್ವತ ವಿದ್ಯಾ ಬುದ್ಧಿ ನೀಡಿದ ಗುರು ಸದಾವಕಾಲ ಸ್ಮರಣೀಯರಾಗಿದ್ದಾರೆ. ವಿದ್ಯೆ-ಬುದ್ಧಿ ನೀಡಿದ ಗುರುವಿಗೆ ನಾವು ವಿಧೇಯಕರಾಗಿ ನಡೆದುಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಣ್ಣಿಗೇರಿ ಗುರುಗಳ ಹಳೇಯ ವಿದ್ಯಾರ್ಥಿಯೂ ಹಿರಿಯ ವೈದ್ಯರೂ ಆದ ಗದುಗಿನ ಡಾ.ಎಸ್.ಬಿ.ಶೆಟ್ಟರ ಅಣ್ಣಿಗೇರಿ ಗುರುಗಳ ವ್ಯಕ್ತಿತ್ವ, ಸಾಧನೆ, ಆಶ್ರಮದ ವ್ಯವಸ್ಥೆ, ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಅವರು ಪ್ರತಿಷ್ಠಾನದ ಧ್ಯೇಯೋದ್ಧೇಶ, ಪ್ರತಿಷ್ಠಾನ ಮಾಡಿದ ಕಾರ್ಯ ಯೋಜನೆ, ದಾನಿಗಳ ಸಹಕಾರ ಕುರಿತು ಮಾತನಾಡಿದರು.
ಆಶ್ರಮದ ವಿದ್ಯಾರ್ಥಿಗಳು ಹಾಗೂ ಬಸಲಿಂಗಪ್ಪ, ಈರಬಸಮ್ಮ ಪ್ರಾರ್ಥಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಕೆ.ಕಟ್ಟಿ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು, ಖಜಾಂಚಿ ಎಸ್.ಆರ್.ಪಾಟೀಲ ಪ್ರತಿಷ್ಠಾನದ ಲೆಕ್ಕಪತ್ರ ಸಾದರಪಡಿಸಿದರು. ಎಸ್.ಜಿ.ಅಣ್ಣಿಗೇರಿ, ಪ್ರವೀಣ ಮಡಿವಾಳರ, ಜಿ.ಬಿ.ಹಾವಣಗಿ, ಪ್ರವೀಣ ಮೊರಬದ, ಮಂಜುಳಾ, ಜ್ಯೋತಿ, ಗಂಗಾ ಅವರಿಗೆ ಗುರುಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದಾನಿಗಳನ್ನು ಗೌರವಿಸಲಾಯಿತು.
ಪರಿಶುರಾಮ ಮಂಗಳಗುಡ್ಡ ಹಾಗೂ ವಿಠ್ಠಲ ಹೂಗಾರ ಅವರಿಂದ ಸಂಗೀತ ಜರುಗಿತು. ಕಳಕಪ್ಪ ಕುರ್ತಕೊಟಿ ನಿರೂಪಿಸಿದರು ಕೊನೆಗೆ ಎಸ್.ಜಿ.ಅಣ್ಣಿಗೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net