

ಕಳಸ: ಮಲೆನಾಡಿನ ಪುಣ್ಯಕ್ಷೇತ್ರ ದಕ್ಷಿಣ ಕಾಶಿ, ಅಗಸ್ತ್ಯ ಕ್ಷೇತ್ರವೆಂದು ಪ್ರಸಿದ್ದಿಯಾಗಿರುವ ಕಳಸದ ಕಲಶೇಶ್ವರ ಸ್ವಾಮಿ ದೇವಾಲಯದಲ್ಲಿ ನ.12ರಂದು ರಾತ್ರಿ 3 ಗಂಟೆಗೆ ಗಿರಿಜಾ ಕಲ್ಯಾಣ ವಿಜೃಂಭಣೆಯಿಂದ ನಡೆಯಲಿದೆ.
ಗಿರಿಜಾ ಕಲ್ಯಾಣದ ಅಂಗವಾಗಿ ಕಲಶೇಶ್ವರ ದೇವಾಲಯ ಹಾಗೂ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ವಿದ್ಯುತ್‌ದ್ವೀಪ, ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ನ.9ರಂದು ಗಣಪತಿ ಪೂಜೆ, ಅಂಕುರಾರ್ಪಣೆ, 10ರಂದು ಕೌತುಕೋತ್ಸವ, 11ಕ್ಕೆ ಧ್ವಜಾರೋಹಣ, ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ಕಾರ್ತಿಕ ದೀಪೋತ್ಸವ ಸುಪ್ರದಕ್ಷಿಣೆ ಸೇವೆ ನಡೆಯಿತು. ನ.12ರಂದು ಸಾಂಪ್ರದಾಯ ಬದ್ದವಾಗಿ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.
ಶಿವನು ಕಲ್ಯಾಣಕ್ಕಾಗಿ ಕಳಸದಲ್ಲಿ ನೆಲೆನಿಂತ ಕಾರಣ ಕಲಶೇಶ್ವರನಿಗೆ ಗಿರಿಜಾ ಕಲ್ಯಾಣವೇ ಶ್ರೇಷ್ಟವಾದ ಉತ್ಸವವಾಗಿದೆ. ಉತ್ತರಾಯಣವನ್ನು ಹಗಲು ಎಂದು, ದಕ್ಷಿಣಾಯನವನ್ನು ರಾತ್ರಿಎಂದು ಕಾಲಮಾನವಿರುವ ದೇವತೆಗಳ ಲೆಕ್ಕಾಚಾರದಲ್ಲಿ ನಿತ್ಯ ಕಲ್ಯಾಣನೋತ್ಸವ ನಡೆಯಲಿದೆ. ಕಾರ್ತಿಕ ಶುದ್ಧ ಏಕಾದಶಿಯಂದು ರಾತ್ರಿ 72 ಘಳಿಗೆಗೆ ಕನ್ಯಾಲಗ್ನ ಎಂದು ಬ್ರಹ್ಮದೇವನು ನಿಶ್ವಯಿಸಿರುವುದರಿಂದ ಈಗಲೂ ಅದರಂತೆ ಗಿರಿಜಾ ಕಲ್ಯಾಣ ನಡೆಯಲಿದೆ.
ಇಲ್ಲಿ ಕನ್ಯಾನಿಶ್ಚಯವಾಗುವುದು ಅಮವಾಸ್ಯೆ ದಿನ. ಅಮವಾಸ್ಯೆ ದಿನ ರಾತ್ರಿ ಶಿವನಿಗೂ ಗಿರಿಜಾಂಬೆಗೂ ಗಿರಿಜಾಂಬ ದೇವಾಸ್ಥಾನದಲ್ಲಿ ಮದುವೆ ನಿಶ್ಚಯವಾಗುತ್ತದೆ. ಅದರಂತೆ ಅಂಕುರಾರ್ಪಣ, ಉತ್ಸವ ಮೂರ್ತಿಗಳಿಗೆ ಕಂಕಣ ಕಟ್ಟುವ ಕಾರ್ಯಕ್ರಮ, ಧ್ವಜಾರೋಹಣ ಕಾರ್ಯಕ್ರಮಗಳು ನಡೆಯುತ್ತದೆ. ನಂತರ ಮುತ್ತೈದೆಯರು ಈಶ್ವರನಲ್ಲಿ ಅರಸಿದ ಎಣ್ಣೆ ಪಡೆದು ಗಿರಿಜಮ್ಮನಿಗೆ ಒಪ್ಪಿಸಲಾಗುತ್ತದೆ. ಗಿರಿಜಾಕಲ್ಯಾಣದ ದಿನ ಉಪಾದಿವಂತರು ವಾದ್ಯ ಘೋಷಗಳೊಂದಿಗೆ ಅಕ್ಷತೆ ಕೊಟ್ಟು ಕಲ್ಯಾಣಕ್ಕಾಗಿ ಊರ ಜನರನ್ನು ಕರೆಯಲಾಗುತ್ತದೆ.