ಮೈಸೂರು: ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ರೋಬೋಟಿಕ್ ಶಸ್ತಚಿಕಿತ್ಸೆ ವಿಧಾನದ ಮೂಲಕ ರೋಗಿಯೊಬ್ಬರ ನಾಲಿಗೆ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ ಎಂದು ಡಾ.ಕೆ.ಆರ್. ಸುಹಾಸ್ ತಿಳಿಸಿದರು.
ಈಚೆಗೆ ಸುಮಾರು 40 ವರ್ಷದ ಮಹಿಳೆಯೊಬ್ಬರು ಊದಿರುವ ನಾಲಿಗೆ ಸಮಸ್ಯೆ ಕಾರಣ ನಗರದ ನಾರಾಯಣ ಆಸ್ಪತ್ರೆಗೆ ಬಂದಿದ್ದರು. ವೈದ್ಯಕೀಯ ತಪಾಸಣೆ ಬಳಿಕ ಇವರಿಗೆ ನಾಲಿಗೆಯಲ್ಲಿ ಕ್ಯಾನ್ಸರ್ ಗೆಡ್ಡೆ ಇರುವುದು ಪತ್ತೆಯಾಯಿತು. ಹೀಗಾಗಿ ನಾವು ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದು, ಬಳಿಕ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆದೊಯ್ದು, ನೂತನ ವಿಧಾನದ ಮೂಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವಿಧಾನದ ಮೂಲಕ ಯಾವುದೇ ದೊಡ್ಡ ಛೇದನವಿಲ್ಲದೆ ಗೆಡ್ಡೆಗಳನ್ನು ತೆಗೆದು ಹಾಕಬಹುದಾಗಿದೆ. ಇದರಿಂದಾಗಿ ಈಗ ರೋಗಿ ಶೀಘ್ರ ಚೇತರಿಕೆ ಕಂಡಿದ್ದಾರೆ. ಇನ್ನು, ತಲೆ, ಕತ್ತಿನ ಕ್ಯಾನ್ಸರ್, ಮೂತ್ರನಾಳದ ಸಮಸ್ಯೆ ಮತ್ತು ಮಹಿಳೆಯರಿಗೆ ಸಾಮಾನ್ಯವಾದ ಆರೋಗ್ಯ ಸಂಬಂಧಿ ಸಮಸ್ಯೆಗಳ ವೇಳೆ ಈ ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಧಾನ ಉಪಕಾರಿಯಾಗಿದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ಎನ್.ರವಿ ಹಾಜರಿದ್ದರು.