

ಜಿ.ನಾಗರಾಜ್, ಬೂದಿಕೋಟೆ
ನಿವಾರ್ ಚಂಡಮಾರುತ ಪರಿಣಾಮ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ತೇವಾಂಶ ಹೆಚ್ಚಾಗಿ ಆಲೂಗಡ್ಡೆ ಹಾಗೂ ಟೊಮ್ಯಾಟೊ ಬೆಳೆಗೆ ಅಂಗಮಾರಿ ರೋಗ ತಗುಲಿದ್ದು, ಲಕ್ಷಾಂತರ ಬಂಡವಾಳ ಹೂಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ನಿವಾರ್ ಚಂಡಮಾರುತಕ್ಕೆ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾದ ಕಾರಣ ಈ ಎರಡೂ ಬೆಳೆಗಳಿಗೆ ಅಂಗಮಾರಿ ರೋಗ ವಕ್ಕರಿಸಿಕೊಂಡಿದೆ. ಬಂಗಾರಪೇಟೆ ತಾಲೂಕಿನಲ್ಲಿ ಸುಮಾರು 135 ಮಿ.ಮೀ.ಮಳೆಯಿಂಗಿದ್ದು, ಇನ್ನೂ ಬಿಸಿಲಿಲ್ಲದೇ ಮೋಡ ಮುಸುಕಿದ ವಾತಾವರಣವಿರುವ ಕಾರಣ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಕೀಟ ಹಾಗೂ ಶಿಲೀಂದ್ರನಾಶಕಗಳನ್ನು ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣವಾಗದೇ ಬೆಳೆಗಳೂ ಒಣಗುತ್ತಿವೆ.
ಹೂಗಳು ನಾಶ: ಬೂದಿಕೋಟೆ ಹೋಬಳಿಯಲ್ಲಿ ಅಧಿಕವಾಗಿ ಚೆಂಡು ಹೂ ಹಾಗೂ ಸೇವಂತಿಗೆ ಹೂವು ಬೆಳೆಯಲಾಗುತ್ತಿದ್ದು, ಜಿಟಿಜಿಟಿ ಮಳೆಯಿಂದ ಹೂಗಳ ಮೇಲೆ ನೀರಿನ ಅಂಶ ಜಾಸ್ತಿಯಾಗಿ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯಲಾರಂಭಿಸಿವೆ. ತಾಲೂಕಿನಲ್ಲಿ 2,637 ಹೆಕ್ಟರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯಲಾಗಿದ್ದು, ತೇವಾಂಶವಿರುವ ಪ್ರದೇಶಗಳಲ್ಲಿ ಬೆಳೆದಿರುವ ತೊಗರಿ, ಅವರೆ, ಅಲಸಂದೆ ಸೇರಿ ಹಲವು ದ್ವಿಧಳ ಧಾನ್ಯ ಬೆಳೆಗಳು ತೇವಾಂಶ ಹೆಚ್ಚಾಗಿ ಕೊಳೆತು ಒಣಗಲಾರಂಭಿಸಿವೆ.
ಉತ್ತಮ ಬೆಲೆ: ಟೊಮ್ಯಾಟೊ ಹಾಗೂ ಆಲೂಗಡ್ಡೆಗೆ ಬೇಡಿಕೆ ಹಾಗೂ ಉತ್ತಮ ಬೆಲೆ ಇದ್ದು, ಟೊಮ್ಯಾಟೊ ಬಾಕ್ಸ್ ಗರಿಷ್ಟ 400 ರೂ.ಗಳಿಗ ಮಾರಾಟವಾಗುತ್ತಿದೆ. ಆಲೂಗಡ್ಡೆ 50 ಕೆಜಿ ಚೀಲಕ್ಕೆ ಸುಮಾರು 1,400 ರಿಂದ 1,600 ರೂ.ಗಳ ವರೆಗೆ ಬೆಲೆ ಇದೆ. ಬೆಳೆಗೆ ಉತ್ತಮ ಬೆಲೆ ಇದ್ದರೂ ನಿವಾರ್ ಚಂಡಮಾರುತದ ಹೊಡೆತಕ್ಕೆ ಸಲು ನಷ್ಟವಾಗುವ ಭೀತಿಯಲ್ಲಿ ರೈತರಿದ್ದಾರೆ.
ರೋಗ ನಿಯಂತ್ರಣಕ್ಕ ಸಲಹೆ: ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ನಿಯಂತ್ರಣಕ್ಕೆ ಸಂಯುಕ್ತ ಶಿಲೀಂಧ್ರನಾಶಕಗಳಾದ ಪೆಮೆಕ್ಸೆಡಾನ್ ಮತ್ತು ಸೈಮೆಕ್ಸಾನಿಲ್ 1 ಮಿ.ಲೀ ಅಥವಾ ಸೈಮೆಕ್ಸಾನಿಲ್ ಮತ್ತು ಮ್ಯಾಂಕೊಜೆಬ್ 3 ಗ್ರಾಂ ಅಥವಾ ಫೆನಾಮಿಡಾನ್ ಮತ್ತು ಮ್ಯಾಂಕೊಜೆಬ್ 3 ಗ್ರಾಂ ಅಥವಾ ಅಮೆಟೋಕ್ಟ್ರಾಡಿನ್ ಮತ್ತು ಡೈಮೆಥೋಮಾರ್ಟ್ 1 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಬಂಗಾರಪೇಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ, ಎನ್.ಶಿವಾರೆಡ್ಡಿ ಸಲಹೆ ನೀಡಿದ್ದಾರೆ.
50 ಕೆಜಿಯ ಬಿತ್ತನೆ ಆಲೂಗಡ್ಡೆೆಗೆ 4000 ರೂ.ಗಳಂತೆ 20 ಮೂಟೆ ಖರೀದಿಸಿ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸತತ ಮಳೆಯಿಂದ ಅಂಗಮಾರಿ ರೋಗ ಹತೋಟಿಗೆ ಬಾರದೇ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಸರ್ಕಾರ ರೈತರಿಗೆ ಪರಿಹಾರ ಕೊಡಲು ಮುಂದಾಗಬೇಕು. ಅಶೋಕ್, ರೈತ ಉಕ್ಕುಂದ