ನಾಳೆ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ

oplus_2
oplus_2
Published on

ರಾಮದುರ್ಗ: ತಾಲೂಕಿನ ಮುದಕವಿ ಗ್ರಾಮದ ವೀರಭದ್ರೇಶ್ವರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ, 25ನೇ ವರ್ಷದ ಮಹಾಕುಂಭಾಭಿಷೇಕ, ಅಡ್ಡಪಲ್ಲಕ್ಕಿ ಉತ್ಸವ ಸಮಾರಂಭ ಅ.28ರಂದು ಜರುಗಲಿದೆ ಎಂದು ಉತ್ಸವ ಸಮಿತಿ ಸದಸ್ಯ ರಾಜು ದಳವಾಯಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, 27ರಂದು ಬೆಳಗ್ಗೆ ಗಂಗೆಪೂಜೆ, ಕುಂಭಾಭಿಷೇಕ, ಹೋಮ ಹವನ ಸೇರಿ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ. 28ರಂದು ಬೆಳಗ್ಗೆ ವೀರಭದ್ರ ಹಾಗೂ ಆಂಜನೇಯಸ್ವಾಮಿಗೆ ರುದ್ರಾಭಿಷೇಕ ಸೇವೆಯೊಂದಿಗೆ ವಿಶೇಷ ಅಲಂಕಾರ ಪೂಜೆ ಜರುಗಲಿದೆ.

ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಗುಗ್ಗಳ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. 10 ಗಂಟೆಗೆ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವ, ಮಧ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಧರ್ಮಸಭೆ ಜರುಗಲಿದ್ದು, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಸಾನ್ನಿಧ್ಯ ವಹಿಸುವರು. ಸಾಗರ ತಾಲೂಕಿನ ವೀರಾಪುರ ಹಿರೇಮಠದ ಡಾ.ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಅರಭಾವಿ-ಮುದಕವಿಯ ಮಠದ ಡಾ.ಗುರುಬಸವಲಿಂಗ ಸ್ವಾಮೀಜಿ, ಕಿಲ್ಲಾತೊರಗಲ್ಲ ಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಟಕೋಳ-ಮುದಕವಿ ಮಠದ ಸಚ್ಚಿದಾನಂದ ಸ್ವಾಮೀಜಿ ಉದ್ಘಾಟಿಸುವರು ಎಂದು ತಿಳಿಸಿದರು.

ವಿಧಾನಸಭೆ ಮುಖ್ಯಸಚೇತಕ ಅಶೋಕ ಪಟ್ಟಣ ಅಧ್ಯಕ್ಷತೆ ವಹಿಸಲಿದ್ದಾರೆ. ವೀರಭದ್ರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಮುದ್ನೂರ, ಸಂಸದ ಜಗದೀಶ ಶೆಟ್ಟರ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಶಾಸಕ ಜಗದೀಶ ಗುಡಗುಂಟಿ, ಕೈಗಾರಿಕೆ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸೇರಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಧುರೀಣರು ಆಗಮಿಸಲಿದ್ದಾರೆ ಎಂದರು.

ಸಂಜೆ ಗೋಧೂಳಿ ಲಗ್ನದಲ್ಲಿ ಮಹಾ ರಥೋತ್ಸವ, ರಾತ್ರಿ 8 ಗಂಟೆಗೆ ಕಾರ್ತಿಕೋತ್ಸವ, ರಾತ್ರಿ ಕಲಾತಂಡಗಳಿಂದ ಜಾನಪದ ಕಾರ್ಯಕ್ರಮ ಹಾಗೂ ಸಾಮಾಜಿಕ ನಾಟಕ ಪ್ರದರ್ಶನ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವಹೀದ್ ಅಹಮ್ಮದ್ ಖಾಜಿ, ಮುಖಂಡರಾದ ಉಮೇಶ ಹಲಗಿ, ಚಿದಾನಂದ ಕಂಬಣ್ಣವರ, ಬಸಯ್ಯ ಹಿರೇಮಠ, ಮಲಯ್ಯ ಹೊಸಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net