

ನಿಪ್ಪಾಣಿ: ಫೆ.14ರಂದು ಮಹಾವಿದ್ಯಾಲಯದ ಗೋಲ್ಡನ್ ಜುಬಲಿ ಕಾನ್ಫರೆನ್ಸ್ ಹಾಲ್‌ನಲ್ಲಿ ಹಸಿರು ರಸಾಯನಶಾಸ್ತ್ರದ ಪರಿಕಲ್ಪನೆಗಳು ಮತ್ತು ರಸಾಯನಶಾಸ್ತ್ರದಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ವಿಧಾನಗಳ ಅನ್ವಯಗಳು ವಿಷಯದ ಕುರಿತು ಒಂದು ದಿನದ ರಾಷ್ಟ್ರಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಿ.ವಿ.ಕೊಪ್ಪದ ತಿಳಿಸಿದ್ದಾರೆ.
ಮಹಾವಿದ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಚಾರ ಸಮ್ಮೇಳನವನ್ನು ನಾಲ್ಕು ಹಂತದಲ್ಲಿ ಆಯೋಜಿಸಲಾಗಿದೆ. ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಡಿ.ಬಿ.ಶಿಂಧೆ ಉದ್ಘಾಟಿಸುವರು. ಅಮರ ಬಾಗೇವಾಡಿ ಗೌರವಾನ್ವಿತ ಅತಿಥಿಯಾಗಿ ಆಗಮಿಸಲಿದ್ದಾರೆ. 11.15ಕ್ಕೆ ನಡೆಯಲಿರುವ ಮೊದಲ ಹಂತದ ಸಮ್ಮೇಳನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ವಿ.ಬದಾಮಿ ಮತ್ತು ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಎರಡನೇ ಹಂತದ ಸಮ್ಮೇಳನದಲ್ಲಿ ಶಿವಾಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎಸ್.ರಾಶೀನ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.
2.30ಕ್ಕೆ ನಡೆಯಲಿರುವ ಮೂರನೇ ಹಂತದಲ್ಲಿ ಪ್ರತಿನಿಧಿಗಳು ತಮ್ಮ ವಿಷಯಾಧಾರಿತ ಪ್ರಬಂಧ ಮಂಡಿಸಲಿದ್ದಾರೆ. ನಾಲ್ಕನೇ ಹಂತದಲ್ಲಿ ವಿದ್ಯಾರ್ಥಿಗಳು ಸೆಮಿನಾರ್ ಹಾಲ್‌ನಲ್ಲಿ ಪ್ರಬಂಧ ಮಂಡಿಸುವರು. ಸಂಜೆ 4.15ಕ್ಕೆ ಜರುಗಲಿರುವ ಮುಕ್ತಾಯ ಸಮಾರಂಭದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ.ಬಸವರಾಜ ಪದ್ಮಸಾಲಿ ಪ್ರಮುಖ ಅತಿಥಿಗಳಾಗಿ ಮತ್ತು ಗೌರವಾನ್ವಿತ ಅತಿಥಿಯಾಗಿ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ಡಾ.ಎಸ್.ಆರ್.ಪಾಟೀಲ ಉಪಸ್ಥಿತರಿರುವರು ಎಂದು ತಿಳಿಸಿದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಎಸ್.ಜಾಗನೂರೆ ಮಾತನಾಡಿ, ಸಮ್ಮೇಳನದಲ್ಲಿ ಮಂಡಿಸಿದ ಎಲ್ಲ ಪ್ರಬಂಧಗಳನ್ನು ಐಎಸ್‌ಬಿಎನ್ ಹೊಂದಿದ ಸಂಕಲನದಲ್ಲಿ ಪ್ರಕಟಿಸಲಿದ್ದೇವೆ ಎಂದರು. ಡಾ.ಎಸ್.ಬಿ.ಸೊಲಬಣ್ಣವರ ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಡಾ.ಬಿ.ಎಂ.ಹಿರೇಮಠ, ಪ್ರೊ.ಕುಮಾರ ತಳವಾರ ಮತ್ತಿತರರು ಉಪಸ್ಥಿತರಿದ್ದರು.