ವಿಜಯಪುರ : ಇಲ್ಲಿನ ವಚನ ಸಾಹಿತ್ಯ ಸಂಸತಿ ವೇದಿಕೆ ವತಿಯಿಂದ ಮೇ 2 ರಂದು ದ್ವೀತಿಯ ವಚನೋತ್ಸವ&2025 ನಡೆಯಲಿದೆ. ವಚನೋತ್ಸವ ನಿಮಿತ್ತ ವಚನ ದೀಪ್ತಿ ಗ್ರಂಥ ಲೋಕಾರ್ಪಣೆ ಹಾಗೂ ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 8.30ಕ್ಕೆ ನಗರದ ಶ್ರೀ ಪವಾಡ ಬಸವೇಶ್ವರ ದೇವಾಲಯದಿಂದ ಶ್ರೀ ಷಣ್ಮುಖಾರೂಢ ಮಠದವರೆಗೆ ಶರಣ ವಚನ ಗ್ರಂಥಗಳ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಷಣ್ಮುಖಾರೂಢ ಮಠದಲ್ಲಿ ಅಭಿನವ ಸಿದ್ಧಾರೂಢ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮ ಆಯೋಜಿಸಲಾಗಿದೆ.
ವೇದಿಕೆ ಅಧ್ಯಕ್ಷ ನ್ಯಾ. ವಿ.ಎಸ್. ಖಾಡೆ ಅಧ್ಯಕ್ಷತೆ ವಹಿಸಲಿದ್ದು, ಮಹಾಪೋಷಕ ಶಂಕರಪ್ಪ ಬಸವಪ್ರಭು(ಸಕ್ರಿ) ಉಪಸ್ಥಿತಿ ವಹಿಸುವರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ವಿ.ಸಿ. ನಾಗಠಾಣ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಮಾಡಲಾಗುವದು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಗ್ರಂಥ ಲೋಕಾರ್ಪಣೆ ಹಾಗೂ ಉಪನ್ಯಾಸಕ ಬಸವರಾಜ ಕುಂಬಾರ ಗ್ರಂಥಾವಲೋಕನ ಮಾಡುವರು.
ಸಂಜೆ 6.30ಕ್ಕೆ ನಗರದ ಪವಾಡ ಬಸವೇಶ್ವರ ದೇವಾಲಯದ ಆವರಣದಲ್ಲಿ ವಚನ ವೈಭವ ಸಾಂಸತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಉದ್ಘಾಟಿಸುವರು. ಅತಿಥಿಗಳಾಗಿ ರಾಜ್ಯ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ ಮಾಸ್ತರ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.