ಗಣೇಶ ಮೂರ್ತಿಗಳ ವಿಸರ್ಜನೆಗೆ ನಾಳೆ ಕಡೇ ದಿನ

ganesha kalyani
Published on

ಬೆಂಗಳೂರು: ಮಹಾನಗರದಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಂಗಳವಾರ (ಸೆ.17) ಕಡೆಯ ದಿನವಾಗಿದ್ದು, ಬಹುತೇಕ ಉತ್ಸವ ಸಮಿತಿಗಳು ಗಣಪತಿ ವಿಗ್ರಹಗಳನ್ನು ಮೆರವಣಿಗೆ, ಶೋಭಾಯಾತ್ರೆ ನಡೆಸಿ ವಿಸರ್ಜನೆ ಮಾಡಿದ್ದಾರೆ.

ಈ ಬಾರಿ ಉತ್ಸವ ಸಮಿತಿಗಳಿಗೆ ಪರವಾನಗಿ ನೀಡಲು ಸುಲಭವಾಗುವಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿತ್ತು. ಆಯಾ ವಲಯದ ವಿವಿಧೆಡೆ 63 ಸ್ಥಳಗಳಲ್ಲಿ ಏಕಗವಾಕ್ಷಿ ಮೂಲಕ ಅನುಮತಿ ಪಡೆದು ಗಣಪನ ಮೂರ್ತಿಗಳನ್ನು ಪೂಜಿಸಲು ಅವಕಾಶ ಮಾಡಿಕೊಡಲಾಗಿತ್ತು. 11 ದಿನಗಳ ಕಾಲ ಉತ್ಸವ ಸಮಿತಿಗಳಿಗೆ ಅನುಮತಿ ನೀಡಿದ್ದು, ಮಂಗಳವಾರದ ಬಳಿಕ ಕಲ್ಯಾಣಿಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲು ಅವಕಾಶ ಇರುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

8 ಲಕ್ಷ ಮೂರ್ತಿಗಳ ವಿಸರ್ಜನೆ:

ಗಣೇಶ ಚತುರ್ಥಿ ದಿನದಿಂದ ಈವರೆಗೆ ನಗರದಾದ್ಯಂತ ಮನೆಗಳಲ್ಲಿ ಪೂಜಿಸಿದಂತಹ ಮೂರ್ತಿಗಳು ಹಾಗೂ ಸಾರ್ವಜನಿಕ ಉತ್ಸವ ಸಮಿತಿಗಳು ಕೂಡಿಸಿದ್ದವು ಸೇರಿ ಒಟ್ಟು 8 ಲಕ್ಷ ವಿಗ್ರಹಗಳು ವಿಸರ್ಜಿಸಲಾಗಿದೆ. ಮೊದಲ ನಾಲ್ಕು ದಿನದಲ್ಲೇ 5 ಲಕ್ಷ ಮೂರ್ತಿಗಳು ವಿಸರ್ಜನೆಯಾಗಿದ್ದವು. ವಾರದ ರಜೆ ಇದ್ದ ಕಾರಣ ಭಾನುವಾರ ನೂರಾರು ಸಮಿತಿಗಳು ಮೆರವಣಿಗೆಗಳಲ್ಲಿ ಸಾಗಿಬಂದು ಸಾಮೂಹಿಕ ಗಣಪತಿ ವಿಸರ್ಜನೆ ಮಾಡಿದ್ದಾರೆ. ಹಲಸೂರು ಕೆರೆ, ಯಡಿಯೂರು ಕೆರೆ, ಸ್ಯಾಂಕಿ ಕೆರೆ, ಅಳ್ಳಾಳಸಂದ್ರ ಕೆರೆ, ರಾಚೇನಹಳ್ಳಿ ಕೆರೆ ಸೇರಿ ಹಲವು ಕೆರೆಗಳ ಬಳಿಯ ಕಲ್ಯಾಣಿಗಳಲ್ಲಿ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net