ನಾಳೆ ಭಾರತೀ ಕಾಲೇಜಿನ ಘಟಿಕೋತ್ಸವ

Published on

ಕೆ.ಎಂ.ದೊಡ್ಡಿ: ಭಾರತೀ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವತಿಯಿಂದ ಘಟಿಕೋತ್ಸವ ಏ.5ರಂದು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ತಿಳಿಸಿದರು.

ಬೆಳಗ್ಗೆ 10.30ಕ್ಕೆ ಕಾಲೇಜು ಆವರಣದ ಕುವೆಂಪು ಸಭಾಂಗಣದಲ್ಲಿ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗ, ಸ್ನಾತಕೋತ್ತರ ವಿದ್ಯಾರ್ಥಿಗಳ ಪದವಿ ಪ್ರದಾನ ನಡೆಯಲಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಭಾರತೀ ವಿದ್ಯಾಸಂಸ್ಥೆಯ ಚೇರ‌್ಮನ್, ಎಂಎಲ್ಸಿ ಮಧು ಜಿ. ಮಾದೇಗೌಡ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು ವಿವಿ ಕುಲಪತಿ ಪ್ರೊ.ಎನ್. ಕೆ.ಲೋಕನಾಥ್, ರಿಜಿಸ್ಟ್ರಾರ್ (ಅಡ್ಮಿನ್) ಬಿ.ಎನ್.ವೀಣಾ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಸಿಇಒ ಆಶಯ್ ಜಿ.ಮಧು, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ. ಎಸ್.ನಾಗರಾಜು, ಪ್ರಾಂಶುಪಾಲ ಡಾ. ಎಂ.ಎಸ್. ಮಹದೇವಸ್ವಾಮಿ, ಕಾಲೇಜಿನ ಪರೀಕ್ಷಾ ನಿಯಂತ್ರಕರಾದ ಕೆ.ಸಿ.ಸುಂದರೇಶ್, ಕೆ.ಟಿ.ಗಣೇಶ್ ಭಾಗವಹಿಸುವರು ಎಂದರು.

ಕಾಲೇಜಿನ ಪರೀಕ್ಷಾ ನಿಯಂತ್ರಕ ಕೆ.ಸಿ. ಸುಂದರೇಶ್ ಮಾತನಾಡಿ, ಭಾರತೀ ಕಾಲೇಜು ತನ್ನದೇ ಆದ ವೈಶಿಷ್ಟೃ ಹೊಂದಿದ್ದು ಇಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉದ್ಯೋಗದಲ್ಲಿರುವುದು ಕಾಲೇಜು ಸಂಸ್ಥಾಪಕ, ಶಿಕ್ಷಣ ಕ್ಷೇತ್ರದ ಭೀಷ್ಮ, ದಿವಂಗತ ಡಾ. ಜಿ.ಮಾದೇಗೌಡ ಅವರ ಕೊಡುಗೆಯನ್ನು ನಾವು ಸ್ಮರಿಸುವ ಅಗತ್ಯವಿದೆ ಎಂದರು.

ಕಾಲೇಜಿನಲ್ಲಿ ನಡೆಯುವ ಐತಿಹಾಸಿಕ ಕಾರ್ಯಕ್ರಮದಲ್ಲಿ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗಗಳಲ್ಲಿ 295, ಸ್ನಾತಕೋತ್ತರ ವಿಭಾಗದಲ್ಲಿ 232 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುವುದು. ಸ್ನಾತಕೋತ್ತರ ವಿಭಾಗದಲ್ಲಿ 10 ವಿಭಾಗದ 5 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಭಾರತೀ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ. ಎಸ್.ನಾಗರಾಜು, ಕಾಲೇಜಿನ ಪರೀಕ್ಷಾ ನಿಯಂತ್ರಕ ಕೆ.ಸಿ.ಸುಂದರೇಶ್, ಕನ್ನಡ ವಿಭಾಗದ ಉಪನ್ಯಾಸಕಿ ಮಮತಾ ನಾಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net