ನಾಳೆ ಬಿವಿವಿಎಸ್ ಬೃಹತ್ ಸಂಭ್ರಮ, ಮುಧೋಳ ಹಬ್ಬ

mdl 3-1b
ಮುಧೋಳದ ಬಿಜಿಎಂಐಟಿ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿವಿವಿಎಸ್ ಸಂಭ್ರಮ ಮುಧೋಳ ಹಬ್ಬದ ಪ್ರಚಾರ ಸಾಮಗ್ರಿಯನ್ನು ಬಿವಿವಿಎಸ್ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಬಿಡುಗಡೆ ಮಾಡಿದರು. ಮುಧೋಳ ಇಂಜಿನಿಯರಿಂಗ್ ಕಾಲೇಜಿನ ಸಮಿತಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಕಟ್ಟಡ ವಿಭಾಗದ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ಪ್ರಾಚಾರ್ಯ ಡಾ.ಶ್ರವಣಕುಮಾರ ಕೆರೂರ ಇದ್ದಾರೆ.
Published on

ಮುಧೋಳ: ಬಿವಿವಿಎಸ್ ಸಂಭ್ರಮ, ಮುಧೋಳ ಹಬ್ಬದ ನಿಮಿತ್ತ ಜ.2 ರಂದು ತಾಲೂಕಿನ 19 ಅಂಗ ಸಂಸ್ಥೆಗಳ ಶಾಲಾ ಕಾಲೇಜು ಹಾಗೂ ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ಉಪನ್ಯಾಸ, ಸಾಧಕರಿಗೆ ಸನ್ಮಾನ ಸೇರಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದೆಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಸಿ. ಚರಂತಿಮಠ ಹೇಳಿದರು.

ನಗರದ ಬಿಜಿಎಂಐಟಿ ಇಂಜಿನಿಯರಿಂಗ್ ಕಾಲೇಜು ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣ, ಸಂಸ್ಕೃತಿ, ಕಲೆ, ಕ್ರೀಡಾ ಮನೋಭಾವ, ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆ ಮಹತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡಲು ಈಗಾಗಲೇ ಬಿವಿವಿಎಸ್ ಸಂಭ್ರಮ ಬಿಡದಿ(ಬೆಂಗಳೂರು) ಹಬ್ಬವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅದೇ ಮಾದರಿಯಲ್ಲಿ ಮುಧೋಳ ಮತ್ತು ರಾಮದುರ್ಗಗಳಲ್ಲಿ ಹಮ್ಮಿಕೊಳ್ಳಲಾಗುವುದು. ಅಂತಿಮವಾಗಿ ಸಂಘದ ಶಾಲಾ ಕಾಲೇಜುಗಳ ಜತೆಗೆ ಬಾಗಲಕೋಟೆ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳನ್ನು ಒಳಗೊಂಡು ಬಿವಿಎಸ್‌ಎಸ್ ಸಂಭ್ರಮ ಬಾಗಲಕೋಟೆಯಲ್ಲಿ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ಬಿವಿವಿಎಸ್ ಸಂಭ್ರಮ -ಮುಧೋಳ ಹಬ್ಬವನ್ನು ಮೊದಲಿಗೆ ಎರಡು ದಿನ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಶೋಕಾಚರಣೆ ನಿಮಿತ್ತ ಎರಡು ದಿನದ ಬದಲು ಜ.2ರಂದು ಮಾತ್ರ ಆಚರಿಸಲಾಗುವುದು. ಬಿವಿವಿಎಸ್ ಸಂಘದ ಮುಧೋಳ ತಾಲೂಕಿನ ಶಾಲಾ ಕಾಲೇಜುಗಳನ್ನೊಳಗೊಂಡು ಈ ಕಾರ್ಯಕ್ರಮದಲ್ಲಿ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಒಂದೆಡೆ ಸೇರುವ ಮೂಲಕ ಶೈಕ್ಷಣಿಕ ಹಬ್ಬವಾಗಿ ಆಚರಿಸಲು ಮತ್ತು ಶಿಕ್ಷಣ ಸಂಸ್ಥೆಗಳ ಜತೆಗೂಡಿ ಒಂದು ಒಳ್ಳೆಯ ಶಿಕ್ಷಣ ಪರಿಸರ ಒದಗಿಸಲು ಇದೊಂದು ವಿನೂತನ ಪ್ರಯತ್ನವಾಗಿದೆ. ಈ ಹಬ್ಬದಲ್ಲಿ ಉಪನ್ಯಾಸ ಕಾರ್ಯಕ್ರಮ, ವಿಚಾರಗೋಷ್ಠಿ, ನಾಟಕ ಪ್ರದರ್ಶನ, ಸಾಂಸ್ಕತಿಕ ಕಾರ್ಯಕ್ರಮ, ಸಂಗೀತ ಸಂಜೆ, ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯುತ್ತದೆ. ಜ.2ರಂದು ಬೆಳಗ್ಗೆ 8.45ಕ್ಕೆ ಮುಧೋಳದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನಡೆಯುವ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಗದಗ-ವಿಜಯಪುರದ ರಾಮಕಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಮಹೇಶ ಎನ್. ಅಥಣಿ ಭಾಗವಹಿಸುವರು ಎಂದು ತಿಳಿಸಿದರು.

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪನೆ: 1906 ಅಕ್ಟೋಬರ್ 18ರಂದು ಈ ಭಾಗದವರಿಗೆ ಮೌಲ್ಯಧಾರಿತ ಶಿಕ್ಷಣ, ಸಂಸ್ಕಾರ ನೀಡಲು ಬೀಳೂರು ಗುರುಬಸವ ಮಹಾಸ್ವಾಮೀಜಿಗಳಿಂದ ಸಂಸ್ಕೃತ ಪಾಠ ಶಾಲೆ ಮೂಲಕ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಆರಂಭಿಸಲಾಯಿತು. ಪ್ರಸ್ತುತ ಸಂಘ ನಡೆಸುತ್ತಿರುವ ವಿವಿಧ ಶಾಲೆ, ಕಾಲೇಜುಗಳಲ್ಲಿ ಅಂದಾಜು 50 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಉತ್ತಮ ವಿದ್ಯಾರ್ಹತೆಯಳ್ಳ 6 ಸಾವಿರಕ್ಕೂ ಹೆಚ್ಚು ಸಮರ್ಪಿತ ಸಿಬ್ಬಂದಿ ಮೇಲ್ವಿಚಾರಣೆಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಡಿಪ್ಲೊಮಾ, ಇಂಜಿನಿಯರಿಂಗ್, ತಂತ್ರಜ್ಞಾನ, ಕಲೆ, ವಿಜ್ಞಾನ, ಸಂಶೋಧನೆ, ವಾಣಿಜ್ಯ, ಕಾನೂನು, ನಿರ್ವಹಣೆ, ಶಿಕ್ಷಣ, ಪತ್ರಿಕೋದ್ಯಮ, ಮಾನವ ಸಂಪನ್ಮೂಲ, ನಸಿರ್ಂಗ್, ತರಬೇತಿ, ಕ್ರೀಡೆ ಮತ್ತು ವೃತ್ತಿಪರ ವ್ಯಾಪಾರ ವಿಭಾಗಗಳ ಜತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯ. ಗ್ರಾಮೀಣಾಭಿವೃದ್ಧಿ, ಕೌಶಲ ತರಬೇತಿ, ಸ್ಟೆಪ್ ಮತ್ತು ಪುಣ್ಯಕ್ಷೇತ್ರಗಳಾದ ಶ್ರೀಶೈಲ ಹಾಗೂ ತಿರುಪತಿಯಲ್ಲಿ ಅನ್ನ ಛತ್ರವನ್ನು ಸಂಘ ನಿರ್ವಹಿಸುತ್ತಿದೆ ಎಂದು ವೀರಣ್ಣ ಚರಂತಿಮಠ ತಿಳಿಸಿದರು.

ಬಿವಿವಿ ಸಂಘದ ಸದಸ್ಯರ ಅವಿರತ ಪ್ರಯತ್ನದಿಂದ 166ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿದೆ. ಗುಣಮಟ್ಟದ ಶಿಕ್ಷಣ ಒದಗಿಸಲು ನಿರಂತರ ಶ್ರಮಿಸುತ್ತಿರುವ ಸಂಘದ ಅನೇಕ ಸಂಸ್ಥೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಗಮನಾರ್ಹ ಎಂದರು.

ನಿಮ್ಮ ಹಬ್ಬದಲ್ಲಿ ಭಾಗಿಯಾಗಿ: ಬಿವಿವಿ ಸಂಘ 1949ರಲ್ಲಿ ಮುಧೋಳದಲ್ಲಿ ಆರ್‌ಎಂಜಿ ಮಾಧ್ಯಮಿಕ ಶಾಲೆ ಪ್ರಾರಂಭಿಸುವ ಮೂಲಕ ತನ್ನ ಕಾರ್ಯಕ್ಷೇತ್ರವನ್ನು ನಗರಕ್ಕೆ ವಿಸ್ತರಿಸಿತು. ಪ್ರಸ್ತುತ 19 ಅಂಗ ಸಂಸ್ಥೆಗಳನ್ನು ಸ್ಥಾಪಿಸಿ ಈ ಭಾಗದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ಮುಧೋಳದಲ್ಲಿ ಗುರುವಾರ ಹಮ್ಮಿಕೊಂಡಿರುವ ಬಿವಿವಿಎಸ್ ಸಂಭ್ರಮ -ಮುಧೋಳ ಹಬ್ಬ ನಿಮ್ಮ ಹಬ್ಬವಾಗಿದ್ದು, ನಗರ ಹಾಗೂ ತಾಲೂಕಿನ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಧೋಳ ಇಂಜನಿಯರಿಂಗ್ ಕಾಲೇಜು ಸಮಿತಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಕಟ್ಟಡ ವಿಭಾಗದ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ಪ್ರಾಚಾರ್ಯ ಶ್ರವಣಕುಮಾರ ಕೆರೂರ, ವಿನಯ ಶೆಟ್ಟರ ಮತ್ತು ಶಾಲಾ ಕಾಲೇಜುಗಳ ಮುಖ್ಯಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net