

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಚಾಕನಕೆರೆಗೆ ಜ.10 ರಂದು ಬೆಳಗ್ಗೆ 10 ಗಂಟೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದ ಬಾಗಿನ ಅರ್ಪಣೆ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಾಕನೆಕೆರೆ ಹಲವಾರು ವರ್ಷಗಳ ನಂತರ ತುಂಬಿರುವ ಹಿನ್ನೆಲೆಯಲ್ಲಿ ಕೆರೆಗೆ ಎಚ್.ಡಿ.ಕುಮಾರಸ್ವಾಮಿ ಬಾಗಿನ ಅರ್ಪಿಸಲಿದ್ದಾರೆ. ಇದೇ ವೇಳೆ ಮಲ್ಲನಕುಪ್ಪೆ ಗ್ರಾಮದಲ್ಲಿ ಪ್ರಗತಿಪರ ರೈತ ಮಹಿಳೆಗೆ ಹಾಗೂ ಪ್ರಗತಿಪರ ರೈತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದಾಜು 5 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆಗಮಿಸುತ್ತಿರುವ ಹಿನ್ನೆಲೆ ಹಾಗೂ ಸಂಸದರಾದ ನಂತರ ತಾಲೂಕಿನಲ್ಲಿ ಅವರದು ಇದೇ ಮೊದಲ ಕಾರ್ಯಕ್ರಮವಾಗಿದೆ. ಆದ್ದರಿಂದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.
ಕೆಆರ್‌ಎಸ್ ಅಣೆಕಟ್ಟೆಯಿಂದ ಕಟ್ಟು ಪದ್ಧತಿಯಲ್ಲಿ ಈ ಹಿಂದಿನಂತೆಯೇ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು. ವಿಶ್ವೇಶ್ವರಯ್ಯ ನಾಲೆ ಆಧುನಿಕರಣದ ನೆಪದಲ್ಲಿ ಬೆಳೆಗಳಿಗೆ ನೀರು ಕೊಡದೆ ಇರಬಾರದೆ ಎಂದು ಜಿಲ್ಲಾಡಳಿತಕ್ಕೆ ಅಗ್ರಹಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಕೆಲಸ ಮಾಡದೆ ಅನಗತ್ಯವಾಗಿ ಕಾಲಹರಣ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿಕೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತ್ತರಿಸಿದ ಡಿ.ಸಿ.ತಮ್ಮಣ್ಣ, ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರಿಗೆ ತಮ್ಮ ಕೆಲಸವನ್ನು ಹೇಗೆ ಮಾಡಬೇಕೆಂಬುದು ತಿಳಿದಿದೆ. ಅವರು ಎಂದಿಗೂ ಕಾಲಹರಣ ಮಾಡುವುದಿಲ್ಲ. ನಿರಂತರವಾಗಿ ಜನಪರವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಯಾರೂ ಕೂಡ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಅವರಿಗೆ ಟಾಂಗ್ ನೀಡಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ, ಡಿ.ಸಿ.ತಮ್ಮಣ್ಣ ಅಭಿಮಾನಿಗಳ ಬಳಗದ ಅಧ್ಯಕ್ಷ ಹೊಸಕೆರೆ ಪ್ರಸನ್ನ, ಮುಖಂಡರಾದ ಕೆ.ಟಿ.ರಾಜಣ,್ಣ ದೇವರಾಜು, ಉಮೇಶ್, ಚಂದ್ರಹಾಸ್, ಶಿವಲಿಂಗ ಇದ್ದರು.