

ಮಡಿಕೇರಿ: ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ನೂತನವಾಗಿ ಆಯ್ಕೆಯಾದ ಸಂಸದರಿಗೆ, ವಿಧಾನ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಕೆ, ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣಾ ಸಮಾರಂಭ ಹಾಗೂ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಜು.೧೯ ರಂದು ಮಡಿಕೇರಿಯಲ್ಲಿ ನಡೆಯಲಿದೆ ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ.ಅರುಣ್ ಕುಮಾರ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಕೆಳಗಿನ ಕೊಡವ ಸಮಾಜದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊಡಗು-ಮೈಸೂರು ಲೋಕಸಭಾ ಸದಸ್ಯ ಯದುವೀರ್ ಒಡೆಯರ್, ಮಂಗಳೂರು ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ ಗೆ ಆಯ್ಕೆಯಾದ ಪದವೀದರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಭೋಜೇಗೌಡ ಅವರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರು, ಮತದಾರರಿಗೆ ಧನ್ಯವಾದ ಸಲ್ಲಿಸಲಾಗುವುದು. ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಕೊಡಗಿನ ಎಲ್ಲಾ ಬಿಜೆಪಿ ಪದಾಧಿಕಾರಿಗಳು, ತಾಲೂಕು ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಸಭೆ: ಅಂದು ಮಧ್ಯಾಹ್ನ ೨ ಗಂಟೆಗೆ ಕೆಳಗಿನ ಕೊಡವ ಸಮಾಜದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.