ಕಾರವಾರ-ಬಿಣಗಾ ಸುರಂಗ ಸಂಬಂಧ ಇಂದು ಡಿಸಿ ಸಭೆ

tunnel.
Published on

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರ ಕಾರವಾರ-ಬಿಣಗಾ ನಡುವಿನ ಸುರಂಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ವಿಚಾರವಾಗಿ ಸೆ.29 ರಂದು ಪ್ರತಿಭಟನೆ ನಡೆಸಲು ಎಂಎಲ್‌ಸಿ ಗಣಪತಿ ಉಳ್ವೇಕರ್ ನೇತೃತ್ವದ ತಂಡ ನಿರ್ಧರಿಸಿ ಸಿದ್ಧತೆ ನಡೆಸಿದೆ. ಈ ನಡುವೆ ಸೆ. 28 ರಂದು ಜಿಲ್ಲಾಧಿಕಾರಿ ಗಂಗೂಬಾಯಿ ಈ ಸಂಬಂಧ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸುರಂಗ ಮಾರ್ಗವು ವಾಹನ ಸಂಚಾರಕ್ಕೆ ಸುರಕ್ಷಿತವಾಗಿರುವ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ(ಎನ್‌ಎಚ್‌ಎಐ)ಜಿಲ್ಲಾಽಕಾರಿಗೆ ವರದಿ ನೀಡಿದ ಬಳಿಕವೂ ಜಿಲ್ಲಾಡಳಿತ ರಾಜಕೀಯ ಉದ್ದೇಶಕ್ಕೆ ಸುರಂಗವನ್ನು ಬಂದ್ ಮಾಡಿಕೊಂಡು ಕುಳಿತಿದೆ ಎಂದು ಎಂಎಲ್‌ಸಿ ಗಣಪತಿ ಉಳ್ವೇಕರ್ ಆರೋಪಿಸಿದ್ದರು.

ಜನರಿಗೆ ತೊಂದರೆ ಉಂಟಾಗುತ್ತಿದ್ದು, ಜಿಲ್ಲಾಡಳಿತ ಟೆನಲ್‌ಗೆ ಅಳವಡಿಸಿದ ಬ್ಯಾರಿಕೇಡ್ ತೆರವು ಮಾಡದೇ ಇದ್ದರೆ ಸೆ. 29 ರಂದು ತಾವೇ ಮುಂದೆ ನಿಂತು ಸುರಂಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದು ತಿಳಿಸಿದ್ದರು. ಅವರು ನೀಡಿದ ಗಡುವು ಸಮೀಪಿಸುತ್ತಿದ್ದರೂ ಜಿಲ್ಲಾಡಳಿತ ಸುರಂಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಲಕ್ಷಣ ಕಾಣುತ್ತಿಲ್ಲ. ಕಾರಣ ಬುಧವಾರ ನಗರಸಭೆಯಲ್ಲಿ ವಿವಿಧ ಸಂಘಟನೆಯ ಸದಸ್ಯರ ಸಭೆ ನಡೆಸಿದರು. ಸಭೆಯಲ್ಲಿ ಟೆಂಪೋ ಚಾಲಕರ ಯೂನಿಯನ್, ಬಿಣಗಾ, ಅರಗಾ, ಚೆಂಡಿಯಾ ಭಾಗದ ನಾಗರಿಕರು ಇದ್ದರು. ಹೋರಾಟದ ಸ್ವರೂಪದ ಬಗ್ಗೆ ಚರ್ಚಿಸಲಾಯಿತು.
ಡಿಸಿ ಪತ್ರ:
ಸುರಂಗ ಸಮರ್ಪಕವಾಗಿಯೇ ನಿರ್ಮಾಣವಾಗಿದೆ. ಭೂಗರ್ಭ ಶಾಸ್ತ್ರಜ್ಞರು ಪರಿಶೀಲಿಸಿದ್ದಾರೆ. ಪುಣೆಯ ಏಜೆನ್ಸಿಯಿಂದ ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ಕೂಡ ನಡೆದಿದ್ದು, ಸುರಂಗ ವಾಹನ ಸಂಚಾರಕ್ಕೆ ಸುರಕ್ಷಿತವಾಗಿದೆ. ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಹರಿಕೃಷ್ಣ ಸೆ.26 ರಂದು ಜಿಲ್ಲಾಽಕಾರಿಗೆ ಪತ್ರ ಬರೆದು ಕೋರಿದ್ದರು. ಆದರೆ, ಜಿಲ್ಲಾಧಿಕಾರಿ ತಕ್ಷಣ ಪತ್ರಕ್ಕೆ ಪ್ರತ್ಯುತ್ತರ ನೀಡಿದ್ದು, ಕೆಲ ಸ್ಪಷ್ಟನೆ, ದಾಖಲೆ ನೀಡುವಂತೆ ಕೇಳಿದ್ದಾರೆ. ಸುರಂಗ ಪರಿಶೀಲನೆ ನಡೆಸಿದ ಏಜೆನ್ಸಿ ಅಽಕೃತ ಎಂಬ ಬಗ್ಗೆ ದಾಖಲೆ ನೀಡಬೇಕು. ಸುರಂಗದಲ್ಲಿ ವಾಹನ ಸಂಚಾರ ಸುರಕ್ಷಿತವಾಗಿರುವ ಬಗ್ಗೆ ಮುಚ್ಚಳಿಕೆ ಪತ್ರ ಬರೆದುಕೊಡಬೇಕು ಎಂದು ತಿಳಿಸಿದ್ದಾರೆ.

ಸುರಂಗ ಬಂದ್ ಮಾಡುವಂತೆ ನಾವೆಲ್ಲೂ ಹೇಳಿಲ್ಲ. ಅದು ವಾಹನ ಸಂಚಾರಕ್ಕೆ ಸುರಕ್ಷಿತವಾಗಿರುವ ಬಗ್ಗೆ ಪ್ರಮಾಣಪತ್ರ ಕೇಳಿದ್ದೇವೆ. ಕಾರವಾರ-ಭಟ್ಕಳ ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ಣ ಮುಗಿಸಿ ಅಲ್ಲಿವರೆಗೆ ಟೋಲ್ ವಸೂಲಿ ಬಂದ್ ಮಾಡಿ ಎಂದು ಹೇಳಿದ್ದೇವೆ. ಆದರೆ, ಐಆರ್‌ಬಿ ಟನಲ್‌ನಲ್ಲಿ ವಾಹನ ಸಂಚಾರ ಬಂದ್ ಮಾಡಿದೆ. ಏನಾದರೂ ಅನಾಹುತ ಸಂಭವಿಸಿದರೆ ಅದರ ಜವಾಬ್ದಾರಿ ವಹಿಸಿಕೊಳ್ಳುವುದಿದ್ದಲ್ಲಿ ಗಣಪತಿ ಉಳ್ವೇಕರ್ ಸುರಂಗವನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡಲಿ.ಮಂಕಾಳ ವೈದ್ಯಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net