

ಬೆಳಗಾವಿ: ನಗರದ ವೆಲ್ ಕಮ್ ಐಟಿಸಿ ಹೋಟೆಲ್‌ನಲ್ಲಿ ಮಾರ್ಚ್ 4ರಂದು ರಾತ್ರಿ 9ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಬೆಳಗಾವಿ, ಚಿಕ್ಕೋಡಿ, ವಿಜಯಪುರ ಮತ್ತು ಬಾಗಲಕೋಟೆ ಲೋಕಸಭೆ ಕ್ಷೇತ್ರಗಳ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ತಿಳಿಸಿದರು.
ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರು, ಮಾಜಿ ಶಾಸಕರು, ಮುಖಂಡರು, ಟಿಕೆಟ್ ಆಕಾಂಕ್ಷಿಗಳು ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.
ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಝಿರಲಿ ಮಾತನಾಡಿ, ಮಾಚ್ 5ರಂದು ಬೆಳಿಗ್ಗೆ 11ಕ್ಕೆ ಚಿಕ್ಕೋಡಿಯಲ್ಲಿ ಬಿಜೆಪಿ ಬೂತ್ ಮೇಲ್ಪಟ್ಟ ಕಾರ್ಯಕರ್ತರ ಸಭೆ ನಡೆಯಲಿದೆ. ಸಂಜೆ 4.30ಕ್ಕೆ ಬೆಳಗಾವಿಯಲ್ಲಿ ಪ್ರಬುದ್ಧರ ಸಭೆ ಆಯೋಜಿಸಲಾಗಿದೆ. ವೈದ್ಯರು, ಉದ್ಯಮಿಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಎಫ್.ಎಸ್. ಸಿದ್ದನಗೌಡ, ಮಲ್ಲಿಕಾರ್ಜುನ ಮಾರಿಹಾಳ, ಹನುಮಂತ ಕೊಂಗಾಲಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.