ಟೊಮ್ಯಾಟೊ ಸಂಸ್ಕರಣೆ, ಮೌಲ್ಯವರ್ಧನೆಗೆ ಉತ್ತೇಜನ ; ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯತ್ರಿ ಮಾಹಿತಿ

5-klr-10
Published on

ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮ್ಯಾಟೊ ಬೆಳೆಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದ್ದು, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಬ್ರಾಡಿಂಗ್‌ಗೆ ಆದ್ಯತೆ ನೀಡಿ ಉದ್ಯಮಗಳ ಉನ್ನತಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಎಂ. ಗಾಯತ್ರಿ ಹೇಳಿದರು.

ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ಟಮಕದಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಕುರಿತು ಸಂವೇದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣೆ ಉದ್ದಿಮೆಗಳ ಮಂತ್ರಾಲಯ ಈ ಯೋಜನೆೆ ಜಾರಿಗೆ ತಂದಿದೆ. ಒಂದು ಜಿಲ್ಲೆಗೆ ಒಂದು ಉತ್ಪನ್ನ ಕಾರ್ಯಕ್ರಮದಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮ್ಯಾಟೊ ಬೆಳೆ ಆಯ್ಕೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಅಂದಾಜು 19,148 ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯುತ್ತಿದ್ದು, 7,97,185 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5,332 ಹೆಕ್ಟೇರ್ ಪ್ರದೇಶದಲ್ಲಿ ರೈತರು ಟೊಮ್ಯಾಟೊ ಬೆಳೆಯುತ್ತಿದ್ದು, 2,78,364 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರದಲ್ಲಿ ಏರಿಳಿತ ಕಂಡು ಬಂದಲ್ಲಿ ರೈತರಿಗೆ ನಷ್ಟ ಉಂಟಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮದಡಿ ಕೆಚಪ್, ಸಾಸ್, ಜಾಮ್, ಸೂಪ್, ಚಟ್ನಿ, ಪ್ಯೂರಿ, ಜ್ಯೂಸ್, ಉಪ್ಪಿನಕಾಯಿ ಮುಂತಾದ ಉತ್ಪನ್ನ ತಯಾರಿಸಲು ಇಲಾಖೆಯಿಂದ ಸಂಸ್ಕರಣಾ ಘಟಕ ನಿರ್ಮಿಸುವುದಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ ಎಂದರು.

ತೋಟಗಾರಿಕೆ ಉಪನಿರ್ದೇಶಕ ವೆಂಕಟೇಶ್ ಮಾತನಾಡಿ, ಈ ಕಾರ್ಯಕ್ರಮದಡಿ ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ, ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತರು, ಉದ್ದಿಮೆದಾರರು, ರೈತ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಗುಂಪು ಮತ್ತು ಉತ್ಪಾದಕ ಸಹಕಾರಿ ಸಂಘಗಳಿಗೆ ಪ್ರೋತ್ಸಾಹ ನೀಡಿ, ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸರಪಳಿ ಕೊಂಡಿಯೊಂದಿಗೆ ಉತ್ತೇಜನ ನೀಡಲಾಗುವುದು ಎಂದರು.ಜಂಟಿ ಕೃಷಿ ನಿರ್ದೇಶಕಿ ರೂಪದೇವಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತುಳಸಿರಾಂ ಭಾಗವಹಿಸಿದ್ದರು. ರೈತರು, ಸ್ವ-ಸಹಾಯ ರೈತ ಸಂಘ ಸದಸ್ಯರು, ವಿವಿಧ ಸಂಸ್ಕರಣಾ ಘಟಕಗಳ ಮಾಲೀಕರು ಪಾಲ್ಗೊಂಡಿದ್ದರು.

ಸಂಸ್ಕರಣಾ ಘಟಕದ ಒಟ್ಟು ವೆಚ್ಚದ ಶೇ.35ರ ಸಹಾಯಧನ ಅಥವಾ ಗರಿಷ್ಟ ರೂ.10 ಲಕ್ಷಗಳನ್ನು ಬ್ಯಾಂಕ್ ಸಾಲದ ಆಧಾರದ ಮೇಲೆ ನೀಡಲಾಗುವುದು. ಅಭ್ಯರ್ಥಿ ಬ್ಯಾಂಕ್ ಸಾಲ ಪಡೆಯಲು ಮತ್ತು ಕನಿಷ್ಠ ಶೇ.10 ಸ್ವಂತ ವೆಚ್ಚ ಭರಿಸಲು ಸಿದ್ಧರಾಗಿರಬೇಕು. ಯಾವುದೇ ಉದ್ಯಮದಲ್ಲಿ ತೊಡಗಿರುವ ವ್ಯಕ್ತಿ, ಸ್ವ-ಸಹಾಯ ಸಂಘ, ರೈತ ಉತ್ಪಾದಕ ಸಂಸ್ಥೆ, ಒಕ್ಕೂಟಗಳು ಸಹಕಾರಿ ಸಂಸ್ಥೆಗಳು ಮತ್ತು ಇತರ ಕಿರು ಉದ್ದಿಮೆದಾರರು ಹೊಸದಾಗಿ ಸಂಸ್ಕರಣಾ ಘಟಕಗಳು ಮಾರಾಟ ಮತ್ತು ರಫ್ತು ಘಟಕ ಸ್ಥಾಪಿಸುವವರಿಗೆ ಈ ಯೋಜನೆಯಡಿ ಸಹಾಯಧನ ಒದಗಿಸಲಾಗುವುದು ಎಂದು ತೋಟಗಾರಿಕೆ ಉಪನಿರ್ದೇಶಕ ವೆಂಕಟೇಶ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net