

ಕೋಲಾರ: ಮೇ ಮುಕ್ತಾಯಗೊಳ್ಳುವ ಹಂತದಲ್ಲಿದ್ದು, ಜೂನ್ ಪ್ರಾರಂಭಗೊಳ್ಳಲಿದೆ. ಆದರೆ ಜಿಲ್ಲೆಯ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಟೊಮ್ಯಾಟೊಗೆ ಬೆಲೆ ಬಾರದೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಾರರಿಗೆ ಆತಂಕ ಉಂಟಾಗಿದೆ.
ಗುರುವಾರ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ ಟೊಮ್ಯಾಟೊ ಬಾಕ್ಸ್ 60 ರೂ.ನಿಂದ 300 ರೂ. ವರೆಗೆ ಮಾರಾಟವಾಗಿದೆ. ಇತ್ತೀಚೆಗೆ ಗುಣಮಟ್ಟವಿಲ್ಲದ ಟೊಮ್ಯಾಟೊ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಕುಸಿಯಲು ಮೂಲ ಕಾರಣ ಎನ್ನಲಾಗಿದ್ದು, ಹೊರ ರಾಜ್ಯಗಳಿಂದ ಟೊಮ್ಯಾಟೊ ಖರೀದಿಸಲು ವ್ಯಾಪಾರಸ್ಥರು ಬಾರದೆ ಇರುವುದು ಮತ್ತು ದಿನೇದಿನೆ ಮಾರುಕಟ್ಟೆಗೆ ಬೆಳೆ ಹೆಚ್ಚಾಗಿ ಬರುತ್ತಿರುವ ಕಾರಣ ದರ ಕುಸಿಯುತ್ತಿದೆ.
ಕಳೆದ ವರ್ಷ ಮೇ ಅಂತ್ಯ ಮತ್ತು ಜೂನ್ಪ್ರಾರಂಭದಲ್ಲಿ 15 ಕೆಜಿ ಬಾಕ್ಸ್ 100 ರೂ.ನಿಂದ 600 ರೂ.ಗಳ ತನಕ ಮಾರಾಟವಾಗಿತ್ತು. ಈ ವರ್ಷ ಟೊಮ್ಯಾಟೊ ಸುಗ್ಗಿ ಪ್ರಾರಂಭಗೊಂಡಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ.
ನೂರಾರು ಆಸೆಗಳನ್ನು ಹೊತ್ತ ರೈತರು ಈ ವರ್ಷ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಪ್ರತಿವರ್ಷ ಮೇ 15 ರಿಂದ ಟೊಮ್ಯಾಟೊ ಉತ್ತಮ ಬೆಲೆ ಬಂದು ಜೂನ್, ಜುಲೈ, ಆಗಸ್ಟ್ ತನಕ ಉತ್ತಮ ಬೆಲೆ ಇರುತ್ತಿತ್ತು. ಹೊರ ರಾಜ್ಯಗಳಿಗೂ ಟೊಮ್ಯಾಟೊ ಪೂರೈಕೆ ಆಗುತ್ತದೆ ಎಂಬ ಆಸೆಯನ್ನು ರೈತರು ಕಂಡು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದೆ.
ಈಗಾಗಲೇ ಫಸಲಿಗೆ ಬಂದಿರುವ ತೋಟಗಳಿಂದ ಟೊಮ್ಯಾಟೊ ಮಾರುಕಟ್ಟೆಗೆ ಬರುತ್ತಿದೆ. ಮಾರುಕಟ್ಟೆಗೆ ಸಾಗಣೆ ಮಾಡುವ ಮತ್ತು ತೋಟದಲ್ಲಿ ಕಾಯಿ ಕೀಳುವ ಕೂಲಿಯೂ ಸಹ ಬಾರದಂತಾಗಿರುವುದರಿಂದ ತೋಟಗಳಲ್ಲಿಯೇ ಟೊಮ್ಯಾಟೊ ಕೀಳದೆ ಬಿಡುವಂತಹ ಪರಿಸ್ಥಿತಿ ರೈತರದ್ದಾಗಿದೆ.
ಇತ್ತೀಚೆಗೆ ಮಾರುಕಟ್ಟೆಗೆ ಟೊಮ್ಯಾಟೋ ತರುವ ರೈತರ ಸಂಖ್ಯೆ ಹೆಚ್ಚಾಗಿದೆ. ಗುರುವಾರ 2,600 ಟನ್ ಟೊಮ್ಯಾಟೊ ಮಾರುಕಟ್ಟೆಗೆ ಬಂದಿತ್ತು. ಮಹಾರಾಷ್ಟ್ರ ಸೇರಿ ಇತರೆ ರಾಜ್ಯಗಳಲ್ಲಿ ಮಳೆಯಾಗುತ್ತಿರುವುದರಿಂದ ಜೂ.1ರ ನಂತರ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ವ್ಯಾಪಾರಸ್ಥರು ಬರುವ ಸೂಚನೆಯಿದೆ. ಆಗ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
-ಕಿರಣ್
ಎಪಿಎಂಸಿ ಕಾರ್ಯದರ್ಶಿ, ಕೋಲಾರ
ಪ್ರತಿವರ್ಷ ಮೇ 15 ರಿಂದ ಆಗಸ್ಟ್ ಪೂರ್ತಿ ಟೊಮ್ಯಾಟೊಗೆ ಉತ್ತಮ ಬೆಲೆ ಬರುತ್ತದೆಂಬ ನಿರೀಕ್ಷೆಯಲ್ಲಿ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಜೂನ್ ಪ್ರಾರಂಭ ಆಗುತ್ತಿದ್ದು, ಟೊಮೆಟೋಗೆ ಬೆಲೆ ಬರುತ್ತಿಲ್ಲ. ಹೀಗೆ ಮುಂದುವರಿದರೆ ಬೆಳೆದ ಹಣ್ಣನ್ನು ರಸ್ತೆಗಳಿಗೆ ಸುರಿಯಬೇಕಾಗುತ್ತದೆ. ಬಾಹು ಎಂಬ ತಳಿಯ ಟೊಮೆಟೋವನ್ನು ರೈತರು ಹೆಚ್ಚಾಗಿ ಬೆಳೆದಿದ್ದಾರೆ. ಅದು ಈ ಬಾರಿ ಗುಣಮಟ್ಟ ಇಲ್ಲದಂತಾಗಿದೆ. ಉತ್ತಮ ಫಸಲು ಇದ್ದರೂ ಗುಣಮಟ್ಟದ ಕೊರತೆಯ ಜತೆಗೆ ಬೆಲೆಯು ಕುಸಿದಿರುವುದರಿಂದ ರೈತರು ಆತಂಕಕ್ಕೆ ಒಳಗಾಗುವಂತಾಗಿದೆ.
- ರಾಮಣ್ಣ
ವಡಗೂರು, ರೈತ