ಟೊಮ್ಯಾಟೊ ಬೆಲೆ ಸುಧಾರಣೆ ಬೆಳೆಗಾರರ ಮುಖದಲ್ಲಿ ದಸರೆ ಕಳೆ

Mayakonda, Tomato, Price,
Published on

ಮಾಯಕೊಂಡ ಭಾಗದ ಹೆಚ್ಚಿನ ಪ್ರದೇಶದಲ್ಲಿ ಬೆಳೆ I ಲಕ್ಷಾಂತರ ರೂ. ಆದಾಯದಲ್ಲಿ ಬೆಳೆಗಾರರು

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ: ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳ ಗ್ರಾಮಗಳಲ್ಲಿ ಬೆಳೆಯುವ ತರಕಾರಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದ್ದು, ಟೊಮ್ಯಾಟೊ ಬೆಳೆಗಾರರಿಗೆ ಬಂಪರ್ ಬೆಲೆ ಲಭಿಸಿದೆ.

ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳ ಹಲವು ಗ್ರಾಮಗಳ 250 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಕೊಳವೆಬಾವಿ ಆಧರಿಸಿ ತರಕಾರಿ, ಹಣ್ಣು, ಪುಷ್ಪಕೃಷಿ ಇದೆ. ಈ ಹೋಬಳಿಗಳು ಜಿಲ್ಲೆಯ ತರಕಾರಿ ಕಣಜವಾಗಿವೆ.

ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ಎಲೆಕೋಸು, ಸಿಹಿಕುಂಬಳ, ಸಾಂಬಾರ್ ಸವತೆ, ಪೇರಲ, ದಾಳಿಂಬೆ, ಬಾಳೆ, ಚೆಂಡು ಹೂವು, ಗುಲಾಬಿ, ಸೇವಂತಿಗೆ ಇಲ್ಲಿನ ಪ್ರಮುಖ ಬೆಳೆಗಳು.

ಕಳೆದೊಂದು ತಿಂಗಳಿನಿಂದ ಟೊಮ್ಯಾಟೊ ಬೆಲೆ ಏರುತ್ತಿದ್ದು, ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 50 ರಿಂದ 60 ರೂ. ಮಾರಾಟವಾಗುತ್ತಿದೆ. 25 ಕೆಜಿ ಟೊಮ್ಯಾಟೊ ಹಣ್ಣಿನ ಒಂದು ಬಾಕ್ಸ್‌ಗೆ ಸಾವಿರ ಗಡಿ ದಾಟಿದೆ. ರೈತರಿಗೆ ಉತ್ತಮ ಆದಾಯ ತಂದಿದೆ.

ಆದಾಯದ ನಿರೀಕ್ಷೆಯಲ್ಲಿ ರೈತ: ಎರಡೂವರೆ ಎಕರೆ ಜಮೀನಿನಲ್ಲಿ 20 ಸಾವಿರ ಸಸಿ ನಾಟಿ ಮಾಡಿದ್ದು, ಬೆಳೆ ಕಟಾವಿಗೆ ಬಂದಿದೆ. ಒಂದು ಸಾವಿರ ಬಾಕ್ಸ್ ಟೊಮ್ಯಾಟೊ ಹಣ್ಣನ್ನು ಮಾರಾಟ ಮಾಡಿದ್ದು ಎಂಟು ಲಕ್ಷ ಆದಾಯ ಬಂದಿದೆ. ಇನ್ನೂ 1200 ರಿಂದ 1500 ಬಾಕ್ಸ್‌ನಷ್ಟು ಹಣ್ಣು ಗಿಡದಲ್ಲಿದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದು, 10 ಲಕ್ಷಕ್ಕಿಂತ ಅಧಿಕ ಆದಾಯ ಬರುವ ನಿರೀಕ್ಷೆ ಹೊಂದಿದ್ದಾರೆ. ಸಸಿ ಖರೀದಿಯಿಂದ ಹಣ್ಣನ್ನು ಕಿತ್ತು ಮಾರುಕಟ್ಟೆ ತಲುಪಿಸುವವರೆಗೆ ಸುಮಾರು 2.25 ಲಕ್ಷ ಹಣ ಖರ್ಚಾಗಿದೆ ಎನ್ನುತ್ತಾರೆ ರೈತ ಎಸ್.ಎಸ್.ಸತೀಶ್.

ಅತಿ ಹೆಚ್ಚು ತರಕಾರಿ, ಹಣ್ಣು, ಹೂವು ಬೆಳೆಯುತ್ತಿರುವ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳಲ್ಲಿ ಶಿಥಲೀಕರಣ ಘಟಕಗಳನ್ನು ನಿರ್ಮಿಸಬೇಕು.
I ಎಸ್. ಎಸ್. ಸತೀಶ್, ರೈತ.

ದಾವಣಗೆರೆ ಜಿಲ್ಲೆಯಲ್ಲಿ ಪ್ರಸ್ತುತ 250 ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದು, ಈಗಾಗಲೇ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯಿದ್ದು ರೈತರಿಗೆ ಹೆಚ್ಚಿನ ಆದಾಯ ತಂದುಕೊಡುತ್ತಿದೆ. ಹೊಸದಾಗಿ 300 ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಸಸಿ ನಾಟಿ ಮಾಡಿರುವ ಅಂದಾಜಿದೆ.
I ರಾಘವೇಂದ್ರ ಪ್ರಸಾದ್, ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ.

ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಜಿಟಿ ಮಳೆ ಸುರಿದಿದ್ದರಿಂದ ಟೊಮ್ಯಾಟೊ ಗಿಡಗಳು ತೇವಾಂಶ ಜಾಸ್ತಿಯಾಗಿ ಹಾಳಾದವು. ಪ್ರಸ್ತುತ ಕಟಾವಿಗೆ ಬಂದಿರುವ ಗಿಡಗಳಲ್ಲಿ ಇಳುವರಿ ಕುಂಠಿತವಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಹಣ್ಣಿನ ಕೊರತೆ ಇದ್ದು, ದರ ಹೆಚ್ಚಾಗಿ ರೈತರಿಗೆ ಆದಾಯ ತಂದು ಕೊಡುತ್ತಿದೆ.
I ಕಳವೂರು ಪ್ರವೀಣ್, ಹೋಲ್‌ಸೇಲ್ ವರ್ತಕ, ದಾವಣಗೆರೆ ತರಕಾರಿ ಮಾರುಕಟ್ಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net