ಟೊಮ್ಯಾಟೊ ದರ ಕುಸಿತ

tomato
Published on

ಮರಿದೇವ ಹೂಗಾರ ಹುಬ್ಬಳ್ಳಿ
ಒಂದೂವರೆ ತಿಂಗಳು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದ್ದ ಟೊಮ್ಯಾಟೊ ದರದಲ್ಲೀಗ ಭಾರಿ ಕುಸಿತ ಕಂಡಿದೆ. ಪ್ರತಿ ಕೆಜಿ ಟೊಮ್ಯಾಟೊಗೆ 120 ರೂ.ಗೂ ಹೆಚ್ಚಿದ್ದ ಬೆಲೆ, ಕಳೆದ ಮೂರು ದಿನಗಳಿಂದ ಪ್ರತಿ ಕೆಜಿಗೆ 30 ರೂ. ಆಸುಪಾಸಿದೆ.

ಮಳೆಯ ಪ್ರಮಾಣ ಕಡಿಮೆ ಆಗಿದೆ. ಹುಬ್ಬಳ್ಳಿ ಎಪಿಎಂಸಿಗೆ ಟೊಮ್ಯಾಟೊ ಆವಕದಲ್ಲಿ ಹೆಚ್ಚಳ ಕಂಡಿದೆ. ಟೊಮ್ಯಾಟೊ ಬೆಲೆ ಕೇಳಿ ಕಂಗಾಲಾಗುತ್ತಿದ್ದ ಗ್ರಾಹಕರಲ್ಲಿ ಖುಷಿ ಹೆಚ್ಚಿದೆ. ತರಕಾರಿ ಬೆಲೆ ಇಳಿಕೆಯಿಂದಲೂ ಮುಖದಲ್ಲಿ ಸಂತೋಷ ಮೂಡಿದೆ. ಆದರೆ, ವ್ಯಾಪಾರಿಗಳು ಹಾಗೂ ರೈತರಿಗೆ ಕಸಿವಿಸಿ ತರಿಸಿದೆ. ಬರೀ ಟೊಮ್ಯಾಟೊ ಮಾರಿಯೇ ಲಕ್ಷಾಧೀಶರು, ಕೋಟ್ಯಾಧೀಶರು ಆಗಿದ್ದವರು, ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ತರಕಾರಿ ಬೆಲೆಗಳೂ ಗ್ರಾಹಕರ ಕೈಗೆಟಕುವಂತಿವೆ.

ಸತತ ಮಳೆಯಿಂದಾಗಿ ತರಕಾರಿ ಬೆಳೆಗಳು ಕೊಳೆತು ಹೋಗಿದ್ದವು. ಮಳೆಯ ತೀವ್ರತೆ ಕಡಿಮೆಯಾಗಿದ್ದರ ಪರಿಣಾಮ ಹುಬ್ಬಳ್ಳಿ ಎಪಿಎಂಸಿಗೆ ರತ್ನಗಿರಿ, ಕೋಲಾರ, ಗೋಕಾಕ್, ಘಟಪ್ರಭಾ, ಬೆಳಗಾವಿ ಜಿಲ್ಲೆಯಿಂದ ಟೊಮ್ಯಾಟೊ ಆವಕವಾಗುತ್ತಿದೆ. ನಿತ್ಯ 12 ಚಕ್ರದ 10ಕ್ಕೂ ಹೆಚ್ಚು ಲಾರಿಗಳಲ್ಲಿ ಟೊಮ್ಯಾಟೊ ಆಗಮಿಸುತ್ತಿದೆ. ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ಸೊಪ್ಪು, ಇತರ ತರಕಾರಿ ಬರುತ್ತಿದೆ. ಹಾಗಾಗಿ ಬೆಲೆಯಲ್ಲಿ ಇಳಿಮುಖ ಕಂಡಿದೆ.

ಡೊಕೊಮೊ ಬೀದಿಪಾಲು

ಗುಣಮಟ್ಟದ ಟೊಮ್ಯಾಟೊ ದರವೇ ಕಡಿಮೆ ಆಗಿರುವುದರಿಂದ ಕಳಪೆ ದರ್ಜೆಯ ಡೊಕೊಮೊ ಟೊಮ್ಯಾಟೊ ಬೀದಿ ಪಾಲಾಗುತ್ತಿದೆ. 30-40 ರೂ.ಗೆ ಕೆಜಿಯಲ್ಲಿ ಗುಣಮಟ್ಟದ ಟೊಮ್ಯಾಟೊ ಸಿಗುತ್ತಿದೆ. ಡೊಕೊಮೊ ಬೆಲೆ 10 ರೂ.ಗೂ ಕಡಿಮೆ ಇದೆ. ಟೊಮ್ಯಾಟೊ ಒಂದು ಬುಟ್ಟಿ (24ಕೆಜಿ) 300-400 ರೂ. ಇದೆ.

ಕೈಗೆಟಕುವ ಸೊಪ್ಪು ಬೆಲೆ

ಮಾರುಕಟ್ಟೆಗೆ ಸೊಪ್ಪು ಯಥೇಚ್ಛವಾಗಿ ಬರುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ. ಸಗಟು ರೂಪದಲ್ಲಿ (ಒಂದು ಸಿವುಡು) ಕೊತ್ತಂಬರಿ 8ರೂ., ಮೆಂತೆ 15 ರೂ.,. ಪಾಲಕ್ 8 ರೂ., ಸಬ್ಬಸ್ಗಿ 5 ರೂ., ತಿರ್ಕಸಾಲಿ 8 ರೂ., ರಾಜಗಿರಿ 4 ರೂ., ಮೂಲಂಗಿ (ಬಿಡಿಯೊಂದಕ್ಕೆ) 8 ರೂ. ಇದೆ.

ಮೂರು-ನಾಲ್ಕು ದಿನಗಳಿಂದ ಟೊಮ್ಯಾಟೊ ಬೆಲೆಯಲ್ಲಿ ಇಳಿಕೆಯಾಗಿದೆ. ಮಳೆ ಪ್ರಮಾಣ ಕಡಿಮೆ ಆಗಿರುವುದು ಇದಕ್ಕೆ ಕಾರಣ. ಮಳೆ ಜೋರಾಗಿದ್ದರೆ ಇನ್ನಷ್ಟು ಬೆಲೆ ಏರಿಕೆಯಾಗುತ್ತಿತ್ತು. ತರಹೇವಾರಿ ತರಕಾರಿ ಬೆಲೆಗಳೂ ಇಳಿಕೆ ಆಗಿದೆ. ನಮಗೂ (ವ್ಯಾಪಾರಿಗಳು) ಮತ್ತು ರೈತರಿಗೆ ಸ್ವಲ್ಪ ಸಂಕಷ್ಟ ಎದುರಾಗಿದೆ.I ರಾಜು ವಾಲ್ಮೀಕಿ, ಹುಬ್ಬಳ್ಳಿ ಜನತಾ ಬಜಾರ್‌ನ ತರಕಾರಿ ವ್ಯಾಪಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net