

ಎನ್. ಮುನಿವೆಂಕಟೇಗೌಡ ಕೋಲಾರ
ಹವಾಮಾನ ವೈಪರೀತ್ಯ, ವೈರಸ್ ಬಾಧೆ ಸೇರಿದಂತೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳ ಕುಸಿತದ ನಡುವೆ ತೀವ್ರ ನಷ್ಟಕ್ಕೆ ಒಳಗಾಗಿರುವ ರೈತನಿಗೆ ನಕಲಿ ಬಿತ್ತನೆ ಬೀಜಗಳ ಹಾವಳಿಯಿಂದ ಬೆಳೆ ನಷ್ಟ ಅನುಭವಿಸುವಂತಾಗಿದೆ.
ಕೋಲಾರ ತಾಲೂಕಿನ ಹೊದಲವಾಡಿಯ ಮಾಣಿಕ್ಯರಾಯ ಸುಮಾರು 30 ವರ್ಷಗಳಿಂದ ಟೊಮ್ಯಾಟೊ ಬೆಳೆಯುತ್ತಿದ್ದಾರೆ. ಈ ಬಾರಿ ಲಾಂತರ ರೂಪಾಯಿ ಖರ್ಚು ಮಾಡಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಸಾಹು ತಳಿಯ ಟೊಮ್ಯಾಟೊ ನಾರು ತಂದು ನಾಟಿ ಮಾಡಿದ್ದರು. ಬಿರು ಬಿಸಿಲಿನ ನಡುವೆಯೂ ಉತ್ತಮ ಬೆಳೆ ಬಂದಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇದೆ. ಆದರೆ ಇನ್ನೇನು ಕಾಯಿ ಕಿತ್ತು ಮಾರುಕಟ್ಟೆಗೆ ಕಳುಹಿಸಬೇಕು ಎನ್ನುವಷ್ಟರಲ್ಲಿ ಎರಡು ಕಾಯಿಗಳು ಜಂಟಿ ಆಗಿ ಒಂದೇ ಆಗಿ ಬಿಟ್ಟಿವೆ. ಇದರಿಂದ ರೈತನಿಗೆ ದಿಕ್ಕು ತೋಚದಂತಾಗಿದೆ.
ಬೇಸಿಗೆಗೆ ಸಾಹು ತಳಿಯ ಟೊಮ್ಯಾಟೊ ಉತ್ತಮ ಬೆಳೆ ಕೊಡುತ್ತದೆ ಎಂದು ನರ್ಸರಿಯಲ್ಲಿ ನಾರು ತಂದು ನಾಟಿ ಮಾಡಿದ್ದ
ರೈತನಿಗೆ ಇಷ್ಟೆಲ್ಲ ಅವಾಂತರಗಳು ಎದುರಾಗಿವೆ. ಈ ಬಗ್ಗೆ ನರ್ಸರಿ ಮಾಲೀಕರ ಬಳಿ ವಿಚಾರಿಸಿದರೆ ನಮಗೇನೂ ಗೊತ್ತಿಲ್ಲ. ಕಂಪನಿಯಿಂದ ಬಂದಂತಹ ಬೀಜಗಳನ್ನು ನಾವು ನಾರು ಬಿಟ್ಟುಕೊಟ್ಟಿದ್ದೇವೆ, ನಮ್ಮದೇನೂ ತಪ್ಪಿಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಿದ್ದಾರೆ ಎಂಬುದು ರೈತನ ಆರೋಪ.
ತಾಲೂಕಿನ ಗದ್ದೆಕಣ್ಣೂರು ಗ್ರಾಮದ ಖಾಸಗಿ ನರ್ಸರಿಯಲ್ಲಿ 9 ಸಾವಿರ ಸಸಿಗಳನ್ನು ತಂದು ನಾಟಿ ಮಾಡಲಾಗಿದೆ. 2 ಏಕರೆಗೆ 5 ಲಕ್ಷ ರೂ. ಖರ್ಚು ಬಂದಿದ್ದು, ಸಸಿಗಳನ್ನು ನಾಟಿ ಮಾಡಿದಾಗಿನಿಂದ ಜೋಪಾನವಾಗಿ ನೋಡಿಕೊಳ್ಳಲಾಗಿತ್ತು. ಫಸಲು ಬಂದಾಗ ಕಾಯಿ ಜೋಡಿಯಾಗಿ ಬರುತ್ತಿದೆ. ಮಾರುಕಟ್ಟೆಯಲ್ಲಿ ಈ ರೀತಿಯ ಕಾಯಿಯನ್ನು ಯಾರೂ ಖರೀದಿಸುವುದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಉತ್ತಮ ಬೆಲೆ ಇದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಯಾಗಿದೆ.
ಕ್ರಮವಹಿಸದ ಅಧಿಕಾರಿಗಳು:ನಕಲಿ ಬಿತ್ತನೆಬೀಜ ವಿತರಣೆ, ಪರವಾನಗಿ ಇಲ್ಲದೆ ಕಳಪೆ ಸಸಿಗಳನ್ನು ನಿಡುವ ನರ್ಸರಿ ಮಾಲೀಕನ ವಿರುದ್ಧ ಕ್ರಮ ಜರುಗಿಸಬೇಕೆಂದು ಸಂ&ಸಂಸ್ಥೆಗಳವರು ಹಲವು ಬಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳಿಗೆ ಚುನಾವಣೆಯ ಮುಂಚೆ ನಡೆದ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿ ಪರವಾನಗಿ ಪಡೆಯದ ಸರ್ಸರಿಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳಾಗಲಿ, ತೋಟಗಾರಿಕೆ ಇಲಾಖೆಯವರಾಗಲೀ ಈವರೆಗೂ ಕ್ರಮವಹಿಸಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
30 ವರ್ಷಗಳಿಂದ ಟೊಮ್ಯಾಟೊ ಬೆಳೆ ಮಾಡು ತ್ತಿದ್ದೇನೆ. ಆಗಾಗ ಹವಾಮಾನ ವೈಪರೀತ್ಯದಿಂದ ಗಿಡ ಸರಿಯಾಗಿ ಬೆಳವಣಿಗೆಯಾ ಗುತ್ತಿರಲಿಲ್ಲ ಎನ್ನುವುದು ಬಿಟ್ಟರೆ ಈ ರೀತಿ ಯಾವ ಬಾರಿಯೂ ಆಗಿಲ್ಲ. ಆದರೆ ಈ ವರ್ಷ ಲಾಂತರ ರೂ. ಖರ್ಚು ಮಾಡಿ ಬೆಳೆ ಮಾಡಿದ್ದೇನೆ. ಕಾಯಿ ಮಾರುಕಟ್ಟೆಗೆ ಕೀಳಬೇಕು ಎನ್ನುವಷ್ಟರಲ್ಲಿ ಒಂದು ಕಾಯಿಯಲ್ಲಿ ಎರಡು ಕಾಯಿಯಾಗಿದ್ದು, ಇವುಗಳನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲವಾಗಿದೆ.
ಮಾಣಿಕ್ಯರಾಯ, ರೈತ, ಹೊದಲವಾಡಿ