ಟೊಮ್ಯಾಟೊ ಕೃಷಿಕರಿಗಿಲ್ಲ ಅದೃಷ್ಟ!

15-RNR-01A
Published on

ವಿಜಯವಾಣಿ ವಿಶೇಷ ರಾಣೆಬೆನ್ನೂರ

‘ಹಲ್ಲಿದ್ದರೆ ಕಡಲೆ ಇಲ್ಲ; ಕಡಲೆ ಇದ್ದರೆ ಹಲ್ಲಿಲ್ಲ‘ ಎಂಬಂಥ ಪರಿಸ್ಥಿತಿ ಇಲ್ಲಿನ ಟೊಮ್ಯಾಟೊ ಬೆಳೆಗಾರರದ್ದಾಗಿದೆ.

ಕಳೆದ 2-3 ತಿಂಗಳ ಹಿಂದೆ ಪಾತಾಳಕ್ಕೆ ಕುಸಿದಿದ್ದ ಟೊಮ್ಯಾಟೊ ಬೆಲೆ ಈಗ ಗಗನಮುಖಿಯಾಗಿದೆ. ಆದರೆ, ಇಲ್ಲಿನ ರೈತರಿಗೆ ಮಾತ್ರ ಇದರ ಲಾಭ ಸಿಗುತ್ತಿಲ್ಲ. ಏಕೆಂದರೆ, ಆಗ ರೈತರ ಬಳಿ ಬೆಳೆ ಇದ್ದರೆ, ಮಾರುಕಟ್ಟೆಯಲ್ಲಿ ಬೆಲೆ ಇರಲಿಲ್ಲ. ಆದರೀಗ, ಮಾರು ಕಟ್ಟೆಯಲ್ಲಿ ಬೆಲೆ ಇದ್ದರೂ ರೈತರ ಬಳಿ ಬೆಳೆ ಇಲ್ಲ.

ಕಳೆದ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಇಲ್ಲಿಯ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಟೊಮ್ಯಾಟೊ ಬೆಲೆ 3 ರೂ.ಗೆ ಕುಸಿತ ಕಂಡಿತ್ತು. ಅದೇ ಟೊಮ್ಯಾಟೊ ಬೆಲೆ ಇದೀಗ ಎಪಿಎಂಸಿ ಮಾರುಕಟ್ಟೆಯಲ್ಲಿ 25ರಿಂದ 30 ರೂ.ವರೆಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು 35ರಿಂದ 40 ರೂ.ಗೆ ಕೆ.ಜಿ.ಯಂತೆ ಮಾರಾಟ ಮಾಡುತ್ತಿದ್ದಾರೆ.

ತಾಲೂಕಿನಲ್ಲಿ ನೀರಾವರಿ ಮಾಡಿಕೊಂಡು ಕಳೆದ ಡಿಸೆಂಬರ್, ಜನವರಿ ತಿಂಗಳಲ್ಲಿ 500ಕ್ಕೂ ಅಧಿಕ ಹೆಕ್ಟೇರ್​ನಷ್ಟು ಟೊಮ್ಯಾಟೊ ಬೆಳೆಯಲಾಗಿತ್ತು. ಈ ಬೆಳೆ ಮಾರ್ಚ್, ಏಪ್ರಿಲ್​ನಲ್ಲಿ ರೈತರ ಕೈಗೆ ಬಂದಿತ್ತು. ಅಷ್ಟರಲ್ಲಿ ಟೊಮ್ಯಾಟೊ ಬೆಲೆ ಪಾತಾಳಕ್ಕೆ ಕುಸಿಯಿತು. ಹೀಗಾಗಿ, ಸಾಕಷ್ಟು ರೈತರು ಬೆಳೆಯನ್ನು ಜಮೀನಿನಲ್ಲಿಯೇ ಕೊಳೆಯಲು ಬಿಟ್ಟಿದ್ದರು. ಇನ್ನು ಕೆಲವರು ಟೊಮ್ಯಾಟೊ ಗಿಡಗಳನ್ನು ಕಿತ್ತು ಹಾಕಿ ಬೇರೆ ಬೇರೆ ಬೆಳೆಗಳತ್ತ ಮುಖ ಮಾಡಿದ್ದರು. ಸದ್ಯ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಸಾಕಷ್ಟು ಹೆಚ್ಚಳವಾಗಿದೆ. ಆದರೆ, ಮಾರಾಟ ಮಾಡಲು ಸ್ಥಳೀಯ ರೈತರ ಬಳಿ ಟೊಮ್ಯಾಟೊ ಇಲ್ಲವಾಗಿದೆ.

ಈಗ ಸ್ಥಳೀಯವಾಗಿ ಟೊಮ್ಯಾಟೊ ಇಲ್ಲದ ಕಾರಣ ಕೋಲಾರದಿಂದ ತರಿಸಲಾಗುತ್ತಿದೆ. ನಿತ್ಯವೂ ಮಾರುಕಟ್ಟೆಗೆ 250ರಿಂದ 400ರಷ್ಟು ಟೊಮ್ಯಾಟೊ ಬಾಕ್ಸ್​ಗಳು ಬರುತ್ತಿವೆ. ಹೀಗಾಗಿ ಅನಿವಾರ್ಯ ಎಂಬಂತೆ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

ಮರುಗುತ್ತಿದ್ದಾನೆ ಬೆಳೆಗಾರ: 2019ರ ಆಗಸ್ಟ್, ಅಕ್ಟೋಬರ್​ನಲ್ಲಿ ಸುರಿದ ನಿರಂತರ ಮಳೆಯಿಂದ ಅತಿವೃಷ್ಟಿ ಉಂಟಾಗಿ ತತ್ತರಿಸಿದ ರೈತರು ಟೊಮ್ಯಾಟೊ ಬೆಳೆದು ಕೊಂಚ ಚೇತರಿಕೆ ಕಾಣಬೇಕು ಎಂದುಕೊಂಡಿದ್ದರು. ಅದರಂತೆ 1 ಎಕರೆಗೆ ಬೀಜ, ಗೊಬ್ಬರ, ಕೂಲಿ ಕಾರ್ವಿುಕರ ಸಂಬಳ ಸೇರಿ 30 ಸಾವಿರ ರೂ.ವರೆಗೂ ಖರ್ಚು ಮಾಡಿ ಟೊಮ್ಯಾಟೊ ಬೆಳೆದಿದ್ದರು. ಆದರೆ, ಬೆಳೆ ಮಾರಾಟಕ್ಕೆ ಬರುವಷ್ಟರಲ್ಲಿ ಕರೊನಾ ಲಾಕ್​ಡೌನ್ ಹಾಗೂ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದ ಹಿನ್ನೆಲೆಯಲ್ಲಿ ಬೆಲೆ ಕುಸಿತವಾಯಿತು.

ಟೊಮ್ಯಾಟೊ ಬೆಳೆ ಕೈಗೆ ಬಂದಾಗ ಬೆಲೆ ಕುಸಿತ ಕಂಡಿದ್ದರಿಂದ ಸಂಪೂರ್ಣ ನಾಶ ಮಾಡಿದ್ದೇವೆ. ಆದರೀಗ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಆದರೆ, ಮಾರಾಟ ಮಾಡಲು ಟೊಮ್ಯಾಟೊ ಇಲ್ಲ. ಹಲ್ಲಿದ್ದಾಗ ಕಡಲೆ ಇರಲಿಲ್ಲ, ಕಡಲೆ ಇದ್ದಾಗ ಹಲ್ಲಿರಲಿಲ್ಲ ಎನ್ನುವಂತಾಗಿದೆ ನಮ್ಮ ಬದುಕು. | ಲಕ್ಷ್ಮಪ್ಪ ಓಲೇಕಾರ, ರೈತಸ್ಥಳೀಯವಾಗಿ ರೈತರ ಬಳಿ ಟೊಮ್ಯಾಟೊ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಕೋಲಾರ ಭಾಗದಿಂದ ಎಪಿಎಂಸಿಗೆ ಆವಕವಾಗುತ್ತಿದ್ದು, ಬೆಲೆ ಹೆಚ್ಚಳವಾಗಿದೆ. | ವಿಜಯಲಕ್ಷ್ಮೀ ಟಿ.ಎಸ್., ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net