ಮಾರುಕಟ್ಟೆಯಲ್ಲಿ ಬೆಲೆ ಇದ್ದಾಗ ಟೊಮ್ಯಾಟೋ ಇಳುವರಿ ಇಲ್ಲ

27cbp1(tamato)
Published on

ಚಿಕ್ಕಬಳ್ಳಾಪುರ: ಬೆಲೆ ಏರಿಕೆ ಕಂಡಿರುವುದರ ನಡುವೆ ಜಿಲ್ಲೆಯಲ್ಲಿ ಬಿಳಿ ನೊಣ ಹಾವಳಿ, ಎಲೆ ಮುದುಡು ವೈರಸ್ ರೋಗದಿಂದ ಶೇ.60 ಕ್ಕಿಂತಲೂ ಹೆಚ್ಚು ಟೊಮ್ಯಾಟೋ ಬೆಳೆ ಇಳುವರಿ ನಾಶವಾಗಿದೆ.
ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳ ಪೈಕಿ ಟೊಮ್ಯಾಟೋ ಸಹ ಒಂದು. ಇದಕ್ಕೆ ಸರ್ಕಾರದ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇಲ್ಲಿ ವಾರ್ಷಿಕ 4365 ಹೆ.ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇದರ ನಡುವೆ ಕಳೆದ ಬೇಸಿಗೆ ಹಂಗಾಮಿನಲ್ಲಿ ಮಾತ್ರವೇ ಬೆಳೆದಿದ್ದರ ಪೈಕಿ ಅತಿಯಾದ ಉಷ್ಣಾಂಶ ಮತ್ತು ಆರ್ದ್ರತೆ ಸೇರಿದಂತೆ ನಾನಾ ಕಾರಣಗಳಿಂದ ಶೇ.60 ಕ್ಕಿಂತಲೂ ಹೆಚ್ಚು ಬೆಳೆ ಇಳುವರಿ ನಾಶವಾಗಿದೆ.

* ಟೊಮ್ಯಾಟೋ ಬೆಲೆ ಏರಿಕೆ
ಇಳುವರಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ಮಾರುಕಟ್ಟೆಗೆ ಟೊಮ್ಯಾಟೋ ಪೂರೈಕೆಯಾಗುತ್ತಿಲ್ಲ. ಬೇಡಿಕೆ ಮತ್ತು ಬೆಲೆ ಹೆಚ್ಚಳವಾಗಿದೆ. ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ (ಜು.27 ರಂದು) 3524 ಕ್ವಿಂಟಾಲ್ ಟೊಮ್ಯಾಟೋ ಆವಕವಾಗಿದ್ದು ಕನಿಷ್ಠ 3330 ರಿಂದ ಗರಿಷ್ಠ 12,300 ರೂರವರೆಗೆ ಮಾರಾಟವಾಗಿದೆ. ಕಳೆದ (ಜು.24 ರಂದು) 364 ಕ್ವಿಂಟಾಲ್ ಆವಕವಾಗಿದ್ದು 3 ಸಾವಿರದಿಂದ 11,500 ರೂ ವರೆಗೆ ಮಾರಾಟವಾಗಿದೆ.
ಹವಾಮಾನ ವೈಪರೀತ್ಯದ ನಡುವೆಯೂ ಉಳಿದುಕೊಂಡಿರುವ ಟೊಮ್ಯಾಟೋ ಬೆಳೆಯಿಂದ ಅನೇಕರು ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಗಳಿಸಿದ್ದಾರೆ. ಈ ಹಿಂದೆ ಸೂಕ್ತ ಬೆಲೆ ಸಿಗದೇ ರಸ್ತೆಗೆ ತಂದು ಸುರಿಯುವ ಇಲ್ಲವೇ ತೋಟದಲ್ಲಿಯೇ ಕೊಳೆಯುವ ದುಸ್ಥಿತಿ ಕಂಡು ಬರುತ್ತಿತ್ತು. ಆದರೆ, ಈಗ ಇಳುವರಿ ಇಲ್ಲ. ಆದರೆ, ನಿರೀಕ್ಷೆಗೂ ಮೀರಿ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ಸಿಗುತ್ತಿದೆ. ಇದರ ಬಿಸಿ ಗ್ರಾಹಕರಿಗೆ ತಟ್ಟಿದ್ದು ಚೌಕಾಸಿ ವಹಿವಾಟು ನಡೆಸುವಂತಾಗಿದೆ.


*ಬೆಲೆ ಇದ್ದಾಗ ಇಳುವರಿ ಇಲ್ಲ
ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನದಡಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವ ಯೋಜನೆಯನ್ನು ಜಾರಿಗೊಳಿಸಿದ್ದು ಇದರಡಿ ಒಂದು ಜಿಲ್ಲೆ, ಒಂದು ಉತ್ಪನ್ನ ಆಧಾರದಲ್ಲಿ ಜಿಲ್ಲೆಯ ಉತ್ಪನ್ನವಾಗಿ ಟೊಮ್ಯಾಟೋ ಬೆಳೆಗೆ ಸ್ಥಾನಮಾನ ದೊರೆತಿದೆ. ಇದರ ಘೋಷಣೆಗೆ ಟೊಮ್ಯಾಟೋ ಬೆಳೆಗಾರರು ಖುಷಿಯಾಗಿದ್ದೇ ದೊಡ್ಡ ಸಾಧನೆ. ಇದನ್ನು ಬಿಟ್ಟರೆ ಪ್ರೋತ್ಸಾಹದಾಯಕ ನೆರವು ಸಮರ್ಪಕವಾಗಿ ಸಿಕ್ಕಿಲ್ಲ. ಇನ್ನು ಈ ಬೆಳೆಯು ಮೊದಲಿನಿಂದಲೂ ಬಹುತೇಕರಿಗೆ ಲಾಭಕ್ಕಿಂತಲೂ ಹೆಚ್ಚಿಗೆ ನಷ್ಟವನ್ನು ತಂದುಕೊಡುತ್ತಿದೆ. ಕರೊನಾ ಹಾವಳಿಯ ಸಂದರ್ಭದಲ್ಲಿ ಟೊಮ್ಯಾಟೋ ಬೆಳೆದ ರೈತರು ಕೈ ಸುಟ್ಟುಕೊಂಡಿದ್ದರು. ಬಳಿಕ ಅತಿವೃಷ್ಟಿಯಿಂದ ತೋಟಗಳು ನಾಶವಾಗಿ, ಸಂಕಷ್ಟ ಅನುಭವಿಸಬೇಕಾಯಿತು. ಹೀಗೆ ನಿರಂತರವಾಗಿ ನಾನಾ ಕಾರಣಗಳಿಂದ ಇಳುವರಿ ನಾಶ, ಬೆಲೆ ಕುಸಿತದ ಸಮಸ್ಯೆಗಳು ಕಾಡುತ್ತಿವೆ. ಈಗ ಒಳ್ಳೆಯ ಬೆಲೆ ಇದ್ದರೂ ಇಳುವರಿ ಇಲ್ಲ.


*ಪರಿಹಾರ ಸಿಗುವಿಕೆ ಅನುಮಾನ
ಅತಿಯಾದ ಉಷ್ಣಾಂಶ ಮತ್ತು ಆರ್ದ್ರತೆಯಿಂದಾಗಿ ಬಿಳಿ ನೊಣದ ಹಾವಳಿ ಹೆಚ್ಚಾಗಿ ಎಲೆ ಮುದುಡು ವೈರಸ್ ರೋಗ ಉಲ್ಭಣವಾಗಿ ಶೇ.60 ಕ್ಕಿಂತಲೂ ಹೆಚ್ಚು ಇಳುವರಿ ನಷ್ಟ ಉಂಟಾಗಿದೆ. ಇದಕ್ಕೆ ಎನ್ ಡಿಆರ್ ಎಫ್ ನಲ್ಲಿ ಪರಿಹಾರ ನೀಡಲು ಅವಕಾಶವಿಲ್ಲ. ಇದಕ್ಕೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಲು ಜಿಲ್ಲಾಧಿಕಾರಿಗಳ ಮೂಲಕ ಪರಿಹಾರಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿರುವ ತೋಟಗಾರಿಕಾ ಇಲಾಖೆಯು, ತಜ್ಞರನ್ನು ರೈತರ ತೋಟಗಳಿಗೆ ಕರೆದುಕೊಂಡು ಹೋಗಿ, ರೋಗದ ಹತೋಟಿ ಕ್ರಮಗಳ ಕುರಿತು ಅರಿವು ಮೂಡಿಸಲಾಗಿದೆ ತಿಳಿಸಿದೆ.

  • ಹಿಂದೆ ಟೊಮ್ಯಾಟೋ ಇಳುವರಿ ಬಂದು, ಮಾರಾಟ ಸಂದರ್ಭದಲ್ಲಿ ಧಾರಾಕಾರ ಮಳೆಗೆ ಬೆಳೆ ನಾಶವಾಯಿತು. ಇದಕ್ಕೆ ಜಮೀನಿನಲ್ಲಿ ಬೇರೆ ಬೆಳೆ ಬೆಳೆಯಲಾಗುತ್ತಿದೆ. ಮತ್ತೊಂದೆಡೆ ಇದೀಗ ಟೊಮ್ಯಾಟೋಗೆ ಒಳ್ಳೆಯ ಬೆಲೆ ಸಿಗುತ್ತಿರುವುದರಿಂದ ನೆರೆಹೊರೆಯ ರೈತರು ಒಳ್ಳೆಯ ಲಾಭವನ್ನು ಪಡೆಯುತ್ತಿದ್ದಾರೆ. ನಮಗೆ ಆರ್ಥಿಕ ನಷ್ಟ ಉಂಟಾಯಿತು.

ರಾಮು, ರೈತ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net