ಹಿಂದಿನ ವರ್ಷದ ಮಾದರಿಯಲ್ಲಿ ಬಂಗಾರದ ಬೆಲೆ ಸಿಗಲಿಲ್ಲ ಟೊಮ್ಯಾಟೊ ಬೆಳೆಗೆ!

5-1.jpg
Published on

ಚಿಕ್ಕಬಳ್ಳಾಪುರ: ಹವಾಮಾನ ವೈಪರೀತ್ಯಕ್ಕೆ ನಾನಾ ಸೋಂಕುಗಳು ಹಾಗೂ ಮಾರುಕಟ್ಟೆಯಲ್ಲಿ ಪೂರೈಕೆಯ ಇಳುವರಿ ಪ್ರಮಾಣ ಹೆಚ್ಚಳದಿಂದ ಬಹುತೇಕ ಟೊಮ್ಯಾಟೋ ಬೆಳೆಗಾರರು ನಿರೀಕ್ಷೆಗೆ ಅನುಗುಣವಾಗಿ ಆದಾಯವನ್ನು ಗಳಿಸಲು ಸಾಧ್ಯವಾಗಿಲ್ಲ.
ಹೌದು! ಕಳೆದ ವರ್ಷ ಜೂನ್‌, ಜುಲೈನಲ್ಲಿ ೧೫ ಕೆ.ಜಿ ಒಂದು ಕ್ರೇಟ್‌ ದರ ೧೨೦೦ ರೂಗಳಿಂದ ೧೬೦೦ ರೂ ಮಾರಾಟವಾಗಿತ್ತು. ಆದರೆ, ಈ ಬಾರಿ ಇದೇ ಅವಧಿಯಲ್ಲಿ ೧೮೦ ರೂಗಳಿಂದ ೨೫೦ ರೂ ದರ ನಿಗದಿಯಾಗಿತ್ತು. ಇದರಿಂದ ಕೆಲ ರೈತರಿಗೆ ನಿರ್ವಹಣೆ ವೆಚ್ಚವೂ ಸಿಕ್ಕಿಲ್ಲ. ಅದರಲ್ಲೂ ಹೈ ಬ್ರೀಡ್‌ ತಳಿ ಬೆಳೆ ನೆಚ್ಚಿಕೊಂಡಿದ್ದವರಿಗೆ ಭಾರಿ, ಕಡಿಮೆ ಬಂಡವಾಳ ಹೂಡಿಕೆಯ ನಾಟಿ ತಳಿ ಬೆಳೆಗೆ ಕೊಂಚ ನಷ್ಟ ಉಂಟಾಗಿದೆ.

*ಟೊಮ್ಯಾಟೋ ಬೆಳೆಗಾರರ ಅಳಲು*
ಹವಾಮಾನ ವೈಪರೀತ್ಯದಿಂದ ಟೊಮ್ಯಾಟೋ ಬೆಳೆಗಳಿಗೆ ನಾನಾ ಸೋಂಕುಗಳು, ಕೀಟ ಸಮಸ್ಯೆಗಳು ಬಾಧಿಸಿದ್ದು ಗುಣಮಟ್ಟ ಕುಸಿತವು ನಷ್ಟಕ್ಕೆ ಪ್ರಮುಖ ಕಾರಣವಾಗಿದೆ.
ಕಳೆದ ಏಪ್ರಿಲ್‌ನಲ್ಲಿ ಹೈಬ್ರಿಡ್‌ ತಳಿಯನ್ನು ಹೆಚ್ಚಿನ ರೈತರು ನಾಟಿ ಮಾಡಿದ್ದು ಗಿಡಗಳು ಒಳ್ಳೆಯ ಬೆಳೆಯುವ ಹಂತಕ್ಕೆ ಬಂದಾಗ ವರುಣರಾಯನ ಆರ್ಭಟದ ಸಮಸ್ಯೆ ಕಾಡಿತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೇ ನಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆ(೬೫.೪ ಮಿ.ಮೀ ೧೪೨ ಮಿ.ಮೀ) ಸುರಿಯಿತು. ಇದೇ ವೇಳೆ ಎಲೆಗಳು ಹಾಗೂ ಕಾಯಿಗಳಲ್ಲಿ ಮಚ್ಚೆಗಳು, ಹಣ್ಣು ಹಳದಿ ಬಣ್ಣಕ್ಕೆ ಪರಿವರ್ತನೆಗೊಳ್ಳುವ ಜಾಂಡೀಸ್‌ ಸೇರಿದಂತೆ ಹಲವು ಸೋಂಕುಗಳು ಬಾಧಿಸಿದವು. ಇವುಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ರಾಸಾಯಾನಿಕ ಔಷಧಗಳು, ಕೀಟನಾಶಕಗಳನ್ನು ಸಿಂಪಡಿಸಬೇಕಾಯಿತು. ಆದರೂ ಬಹುತೇಕ ಕಡೆ ಗುಣಮಟ್ಟದ ಇಳುವರಿ ಸಿಗಲಿಲ್ಲ.‌ ಸಾಮಾನ್ಯವಾಗಿ ಸಣ್ಣ, ಮಧ್ಯಮ ಹಾಗೂ ಬೃಹತ್‌ ಗಾತ್ರದ ಆಧಾರದ ಮೇಲೆ ದರವನ್ನು ನಿಗದಿಯಾಗುವುದರಿಂದ ಒಳ್ಳೆಯ ಬೆಲೆ ಸಿಗಲಿಲ್ಲ.
ಒಂದು ಎಕರೆಯಲ್ಲಿ ಟೊಮ್ಯಾಟೋ ಬೆಳೆಯಲು ನಾರಿಗೆ ೨೫ ಸಾವಿರ ರೂ, ರಾಸಾಯಾನಿಕ ಔಷಧಗಳು ಹಾಗೂ ಕೀಟನಾಶಕಗಳಿಗೆ ೮೦ ಸಾವಿರ ರೂ, ಕಾರ್ಮಿಕರಿಗೆ ಕೂಲಿ, ಸಾಗಾಣೆ ಇತರ ನಿರ್ವಹಣೆ ವೆಚ್ಚ ಸೇರಿದಂತೆ ೨ ಲಕ್ಷ ರೂ ಬಂಡವಾಳ ಹೂಡಿದ್ದು ಇದಕ್ಕೆ ೧.೫೦ ಲಕ್ಷ ರೂ ಆದಾಯ ಮಾತ್ರ ಸಿಕ್ಕಿದೆ ಎಂದು ಬೆಳೆಗಾರ ಶ್ರೀನಿವಾಸ್‌ ಅಳಲು ತೋಡಿಕೊಂಡಿದ್ದಾರೆ.

*ಮಾರುಕಟ್ಟೆಗೆ ಹೆಚ್ಚಿನ ಇಳುವರಿ*
ಮಾರುಕಟ್ಟೆಗೆ ಇಳುವರಿ ಪೂರೈಕೆಯಾಗುತ್ತಿದ್ದ ಪ್ರಾರಂಭದಲ್ಲಿ (ಜೂನ್‌ ಅಂತ್ಯದಿಂದ ಜುಲೈ ಎರಡನೇ ವಾರದವರೆಗೆ) ನಿರೀಕ್ಷೆಗೆ ಅನುಗುಣವಾಗಿ ಟೊಮ್ಯಾಟೋ ಸಿಕ್ಕಿಲ್ಲ. ಚಿಕ್ಕಬಳ್ಳಾಪುರದಲ್ಲಿ ೧೫ ಕೆ.ಜಿಯ ಒಂದು ಕ್ರೇಟ್‌ಗೆ ೧೫೦ ರಿಂದ ೧೮೦ ರೂ ಮಾರಾಟವಾದರೆ, ಚಿಂತಾಮಣಿ ಹಾಗೂ ಕೋಲಾರದಲ್ಲಿ ೨೫೦ ರಿಂದ ೪೦೦ ರೂ ದರ ನಿಗದಿಯಾಗಿತ್ತು. ಅದು ಮಾರುಕಟ್ಟೆಗೆ ಹೆಚ್ಚಿನ ಇಳುವರಿ ಬಂದ ಹಿನ್ನೆಲೆಯಲ್ಲಿ ಗುಣಮಟ್ಟ ಉತ್ಪನ್ನಕ್ಕೆ ಮಾತ್ರ ಒಳ್ಳೆಯ ದರ ಸಿಕ್ಕಿದೆ. ಆದರೆ, ಇದರ ನಡುವೆ ಹವಾಮಾನ ವೈಪರೀತ್ಯದಿಂದ ಸಣ್ಣ ಹಾಗೂ ಮಧ್ಯಮ ಗಾತ್ರ ಟೊಮ್ಯಾಟೋ  ಹೆಚ್ಚಿನ ಬೇಡಿಕೆ ಇರಲಿಲ್ಲ. ಇದರಿಂದ ಬೆರಳೆಣಿಕೆಯ ರೈತರಿಗೆ ಮಾತ್ರ ನಷ್ಟ ಉಂಟಾಗಿಲ್ಲ. ಆದರೆ, ಏಕಮಾತ್ರ ಟೊಮ್ಯೋಟೋ ಬೆಳೆಯನ್ನು ನೆಚ್ಚಿಕೊಂಡವರು ಆದಾಯ ಸಿಗದೇ ನಿರಾಶೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net