ಬೆಳೆಗಾರನ ನಿದ್ದೆಗೆಡಿಸಿದ ಟೊಮ್ಯಾಟೊ ಧಾರಣೆ ಏರಿಳಿತ

9-klr-1
Published on

ಕೋಲಾರ: ಕಳೆದ ತಿಂಗಳವರೆಗೆ ಉತ್ತಮ ಬೆಲೆ ಕಂಡಿದ್ದ ಟೊಮ್ಯಾಟೊ ಮಳೆಯಿಂದಾಗಿ ಗುಣಮಟ್ಟ ಕಳೆದುಕೊಂಡು ವಾರದಿಂದೀಚೆಗೆ ಧಾರಣೆಯಲ್ಲೂ ಹಾವು-ಏಣಿ ಆಟ ಆರಂಭಿಸಿರುವುದು ಬೆಳೆಗಾರನ ನಿದ್ದೆಗೆಡಿಸಿದೆ.

ಜಿಲ್ಲೆಯ ವಾತಾವರಣ ವರ್ಷವಿಡೀ ಟೊಮ್ಯಾಟೊ ಬೆಳೆಯಲು ಪೂರಕವಾಗಿದೆ. ಕೋಲಾರ ಮಾರುಕಟ್ಟೆಯಿಂದ ವಿವಿಧ ಜಿಲ್ಲೆಗಳಿಗೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶಕ್ಕೆ ಟೊಮ್ಯಾಟೊ ಸರಬರಾಜು ಆಗುತ್ತದೆ. ಪ್ರಮುಖವಾಗಿ ಮಹಾರಾಷ್ಟ್ರ, ಉತ್ತರಪ್ರದೇಶ, ಛತ್ತೀಸ್‌ಘಡ, ಪಶ್ಚಿಮಬಂಗಾಳ, ರಾಜಸ್ತಾನ, ಒಡಿಶಾ, ಗುಜರಾತ್ ಇನ್ನಿತರ ರಾಜ್ಯಗಳಿಗೆ ರವಾನೆಯಾಗುತ್ತದೆ.

ಉತ್ತರಭಾರತದ ವ್ಯಾಪಾರಸ್ಥರು ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ ಸಹಜವಾಗಿಯೇ ಬೆಲೆಯಲ್ಲಿ ಚೇತರಿಕೆ ಕಾಣುತ್ತದೆ. ಈ ಭಾಗದಲ್ಲಿ ಯಾವುದೇ ಪ್ರಾಕೃತಿಕ ವಿಕೋಪ ಎದುರಾದರೂ ಇದರ ಧನಾತ್ಮಕ ಇಲ್ಲವೇ ಋಣಾತ್ಮಕ ಪರಿಣಾಮ ಇಲ್ಲಿನ ಟೊಮ್ಯಾಟೊ ಮಾರುಕಟ್ಟೆ ಮೇಲೆ ಬೀಳುವುದರಿಂದ ರೈತರ ಪಾಲಿಗೆ ಟೊಮ್ಯಾಟೊ ಅದೃಷ್ಟದ ಆಟದಂತಾಗಿದೆ.

ಜಿಲ್ಲೆಯಲ್ಲಿ 3000 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದು, ಎರಡು ವಾರದಲ್ಲಿ ಜಿಲ್ಲಾದ್ಯಂತ ಭಾರಿ ಮಳೆಯಾದ್ದರಿಂದ ಹಣ್ಣು ಗುಣಮಟ್ಟ ಕಳೆದುಕೊಂಡಿದೆ. ಹೆಚ್ಚಿನ ರೈತರು ಬೆಳೆದಿರುವ ತಳಿ ಮಳೆಗೆ ಬೇಗ ನೀರು ಬಿಟ್ಟುಕೊಳ್ಳುತ್ತಿರುವುದರಿಂದ ದೂರದ ರಾಜ್ಯಗಳಿಗೆ ರಫ್ತು ಮಾಡಲು ಸಾಧ್ಯವಾಗದಿರುವುದು ಧಾರಣೆಯಲ್ಲಿ ಇಳಿತಕ್ಕೆ ಕಾರಣವಾಗಿದೆ.

ಕಳೆದ ತಿಂಗಳು 15 ಕೆಜಿ ಬಾಕ್ಸ್ ಟೊಮ್ಯಾಟೊಗೆ 550ರಿಂದ 600 ರೂ. ಧಾರಣೆ ಇತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಲ್ಲಿ ಗರಿಷ್ಠ 350-400 ರೂ.ಗೆ ಇಳಿದಿದೆ. ಧಾರಾಕಾರ ಮಳೆಯಾಗುತ್ತಿರುವುದರಿಂದ ರಾಜ್ಯಗಳ ಲಾರಿಗಳು ಮಾರುಕಟ್ಟೆಯಲ್ಲೇ ಠಿಕಾಣಿ ಹೂಡಿರುವುದೂ ಬೆಲೆ ಕುಸಿತಕ್ಕೆ ಮತ್ತೊಂದು ಕಾರಣ.

ನಾಟಿಗೆ ಬೆಲೆ ಜಾಸ್ತಿ: ಆದರೆ ನಾಟಿ ಟೊಮ್ಯಾಟೊ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಬಾಕ್ಸ್‌ಗೆ ಗರಿಷ್ಠ 500 ರಿಂದ-550 ರೂ. ಇದೆ.

ಅಲ್ಪ ಚೇತರಿಗೆ: ಕೋಲಾರ ಎಪಿಎಂಸಿಗೆ ಪ್ರತಿನಿತ್ಯ 16,000 ಕ್ವಿಂಟಾಲ್ ಟೊಮ್ಯಾಟೊ ಆವಕವಾಗುತ್ತಿದೆ. ಕಳೆದ ಮೂರು ದಿನಗಳಿಗೆ ಹೋಲಿಸಿದರೆ ಭಾನುವಾರ ಧಾರಣೆಯಲ್ಲಿ ಸ್ಬಲ್ಪ ಚೇತರಿಕೆ ಕಂಡಿದೆ. 15 ಕೆಜಿ ಬಾಕ್ಸ್ ಒಂದರ ಕನಿಷ್ಠ ಧಾರಣೆ 80 ರೂ, ಸರಾಸರಿ 200 ರೂ. ಹಾಗೂ ಗರಿಷ್ಠ 450 ರೂ.ಗೆ ಮಾರಾಟವಾಗಿದೆ.

ಜಿಲ್ಲೆಯಲ್ಲಿ ಬಿದ್ದ ಮಳೆಗೆ ತಳಿಯೊಂದರ ಟೊಮ್ಯಾಟೊ ಬೇಗ ನೀರು ಬಿಟ್ಟುಕೊಂಡು ಗುಣಮಟ್ಟ ಇಲ್ಲದ್ದರಿಂದ ವ್ಯಾಪಾರಸ್ಥರು, ಮಂಡಿ ಮಾಲೀಕರಿಗೆ ಹೊರ ರಾಜ್ಯಗಳಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತಾದರೂ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಟಿ.ಎಸ್. ರವಿಕುಮಾರ್, ಕಾರ್ಯದರ್ಶಿ, ಎಪಿಎಂಸಿ ಕೋಲಾರ ಟೊಮ್ಯಾಟೊ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಮೂರ್ನಾಲ್ಕು ದಿನಗಳ ಹಿಂದೆ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದರಿಂದ ಲಾಭದ ನಿರೀಕ್ಷೆ ಹುಸಿಯಾಯಿತು. ಮಳೆ ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಬೆಲೆ ಚೇತರಿಕೆ ಕಾಣಬಹುದು. ನಾರಾಯಣಪ್ಪ, ಟೊಮ್ಯಾಟೊ ಬೆಳೆಗಾರ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net