

ದೇವದುರ್ಗ: ತಾಲೂಕಿನ ತಿಂಥಣಿ ಬ್ರಿಡ್ಜ್ ಹಾಗೂ ಕಲ್ಮಲಾ ರಾಜ್ಯ ಹೆದ್ದಾರಿಯಲ್ಲಿ ಎರಡೂ ಕಡೆ ಟೋಲ್‌ಗೇಟ್ ಆರಂಭ ಮಾಡುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕಿನಲ್ಲಿ ಓಡಾಡುವ ಬಹುತೇಕ ವಾಹನಗಳು ರೈತರಿಗೆ ಸಂಬಂಧಿಸಿದ್ದಾಗಿವೆ.
ರಾಜ್ಯ ಹೆದ್ದಾರಿ ಹೆಸರಿಗೆ ಮಾತ್ರವಿದ್ದು ಹೇಳಿಕೊಳ್ಳುವಂಥ ಅಭಿವೃದ್ಧಿ ಸೌಲಭ್ಯವಿಲ್ಲ. ಸದರಿ ರಸ್ತೆಯಲ್ಲಿ ರೈತರ ಟ್ರ್ಯಾಕ್ಟರ್, ಕೂಲಿಕಾರರ ತುಂಬಿಕೊಂಡು ಓಡಾಡುವ ಟಂಟಂ, ಆಟೋ, ಸಂಚರಿಸುತ್ತಿವೆ.
ನಮ್ಮ ಭಾಗದಲ್ಲಿ ಯಾವುದೇ ದೊಡ್ಡ ಕಾರ್ಖಾನೆ, ವ್ಯಾಪಾರ ಕೇಂದ್ರಗಳಿಲ್ಲ. ಇಂಥ ರಸ್ತೆಯಲ್ಲಿ ಎರಡೂ ಕಡೆ ಟೋಲ್ ಗೇಟ್ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ. ಕೂಡಲೇ ರಾಜ್ಯ ಸರ್ಕಾರ ಟೋಲ್‌ಗೇಟ್ ಮಾಡುವ ನಿರ್ಧಾರ ಕೈಬಿಡಬೇಕು. ಇಲ್ಲದಿದ್ದರೆ ರೈತರೇ ಟೋಲ್‌ಗೇಟ್ ಅನ್ನು ಕಿತ್ತಿ ಎಸೆಯುತ್ತೇವೆ ಎಂದು ತಿಳಿಸಿದ್ದಾರೆ.