ಸೂರಲ್ಪಾಡಿಯಲ್ಲಿ ಟೋಲ್‌ಗೇಟ್ : ಬಿಕರ್ನಕಟ್ಟೆ-ಸಾಣೂರು ಹೆದ್ದಾರಿಯೊಂದಿಗೆ ನಿರ್ಮಾಣವಾಗುತ್ತಿದೆ ಸುಂಕ ವಸೂಲಿ ಕೇಂದ್ರ

18
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಮಂಗಳೂರಿನ ಬಿಕರ್ನಕಟ್ಟೆಯಿಂದ ಕಾರ್ಕಳಕ್ಕೆ ಹತ್ತಿರದ ಸಾಣೂರುವರೆಗೆ 45 ಕಿಮೀ ಅಂತರದಲ್ಲಿ ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ರಾಷ್ಟ್ರೀಯ ಹೆದ್ದಾರಿ 169ರ ಗಂಜಿಮಠ ಗ್ರಾಪಂ ವ್ಯಾಪ್ತಿಯ ಸೂರಲ್ಪಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಟೋಲ್ ಗೇಟ್ ಎನ್‌ಎಚ್‌ಎಐನ ನಿಯಮ ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಎರಡು ಟೋಲ್ ನಡುವಿಲ್ಲ ಅಂತರ

ಭವಿಷ್ಯದಲ್ಲಿ ಸ್ಥಾಪನೆಯಾಗಲಿರುವ ಗಂಜಿಮಠ ಟೋಲ್ ಗೇಟ್ ತಲಪಾಡಿ ಟೋಲ್ ಪ್ಲಾಜಾಕ್ಕೆ 36 ಕಿಮೀ ಅಂತರದಲ್ಲಿ, ಹೆಜ್ಮಾಡಿ ಟೋಲ್ ಪ್ಲಾಜಾಕ್ಕಿಂತ 45 ಕಿಮೀ ಅಂತರದಲ್ಲಿ ಹಾಗೂ ಬ್ರಹ್ಮರಕೂಟ್ಲು ಟೋಲ್ ಗೇಟ್‌ಗಿಂತ 45 ಕಿಮೀ ಅಂತರದಲ್ಲಿ ನಿರ್ಮಾಣಗೊಳ್ಳುತ್ತಿದೆ. ಎರಡು ಟೋಲ್ ಪ್ಲಾಜಾಗಳ ಮಧ್ಯೆ 60 ಕಿಮೀ ಅಂತರವಿರಬೇಕು ಎನ್ನುವುದು ಎನ್‌ಎಚ್‌ಎಐ ನಿಯಮ. ಆದರೆ ಸೂರಲ್ಪಾಡಿಯಲ್ಲಿನ ಟೋಲ್‌ಗೇಟ್ ನಿರ್ಮಾಣ ಕಾರ್ಯ ಎನ್‌ಎಚ್‌ಎಐ ನಿಯಮ ಸಾರಾಸಗಟಾಗಿ ಉಲ್ಲಂಘಿಸಿದಂತಿದೆ. ಸೂರಲ್ಪಾಡಿ ಮಸೀದಿಗಿಂತ ಸ್ವಲ್ಪ ಎದುರಿನಲ್ಲಿ ಟೋಲ್ ನಿರ್ಮಾಣವಾಗುತ್ತಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.

ಜಾಗ ಸ್ವಾಧೀನ

ಟೋಲ್ ಗೇಟ್ ನಿರ್ಮಿಸಲು ಸೂರಲ್ಪಾಡಿಯಲ್ಲಿ ಎನ್‌ಎಚ್‌ಎಐ ಈಗಾಗಲೇ ಜಾಗ ಸ್ವಾಧೀನಪಡಿಸಿ, ಸರ್ವೇ ಪೂರ್ಣಗೊಳಿಸಿದೆ. ಮೊದಲಿಗೆ ಸೂರಲ್ಪಾಡಿಗೆ ಹತ್ತಿರದ ಮಸೀದಿ ಬಳಿಯಿಂದ ಟೋಲ್ ಗೇಟ್ ಕಾಮಗಾರಿ ಆರಂಭಿಸಲು ಪ್ರಾಧಿಕಾರ ಪ್ರಸ್ತಾವಿಸಿತ್ತಾದರೂ, ನಂತರದಲ್ಲಿ ಒತ್ತಡಕ್ಕೆ ಮಣಿದು ಮಸೀದಿಗಿಂತ ಸ್ವಲ್ಪ ಮುಂದೆ ಟೋಲ್ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಹಾಗಾಗಿ ಈಗ ಮಸೀದಿ ಜಾಗ ಬಿಟ್ಟು ಟೋಲ್ ಗೇಟ್ ನಿರ್ಮಿಸಲಾಗುತ್ತಿದೆ. ಹೊಸ ಪ್ರಸ್ತಾವ ಕಾರ್ಯಗತ ಹಿನ್ನೆಲೆಯಲ್ಲಿ ಗಂಜಿಮಠದ ರಾಜ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲಾ ಆಟದ ಮೈದಾನ ಮತ್ತು ಶಾಲಾ ಕಟ್ಟಡದ ಎದುರಿನ ಭಾಗ ಸ್ವಾಧೀನಪಡಿಸಿ, ಸರ್ವೇ ಗುರುತು ಹಾಕಲಾಗಿದೆ. ಜತೆಗೆ ಹತ್ತಿರದಲ್ಲಿ, ಅದೇ ಪಾರ್ಶ್ವದಲ್ಲಿರುವ ಹೆಂಚಿನ ಕಾರ್ಖಾನೆ ಜಾಗ ಸ್ವಾಧೀನಪಡಿಸಲಾಗಿದೆ.

ಒಂದೂವರೆ ವರ್ಷದೊಳಗೆ ಯೋಜನೆ ಪೂರ್ಣ

ಹೆದ್ದಾರಿ ವಿಸ್ತರಣೆ ಜತೆಗೆ ಹೆದ್ದಾರಿ ಒಂದು ಪಾರ್ಶ್ವದಲ್ಲಿ ಟೋಲ್ ಗೇಟ್‌ಗೆ ಸಂಬಂಧಿಸಿದ 4 ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಹೆದ್ದಾರಿ ವಿಸ್ತರಣೆಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ತೊಡಕು ಎದುರಾಗದೆ ಹೋದಲ್ಲಿ ಮುಂದಿನ ಒಂದೂವರೆ ವರ್ಷದೊಳಗೆ ಚತುಷ್ಪಥ ಯೋಜನೆ ಪೂರ್ಣಗೊಳ್ಳಲಿದೆ ಎಂದು ಎನ್‌ಎಚ್‌ಎಐನ ಮೂಲವೊಂದು ತಿಳಿಸಿದೆ.

ಎನ್‌ಎಚ್‌ಎಐ ನಿಯಮ ಉಲ್ಲಂಘಿಸಿ ಸೂರಲ್ಪಾಡಿಯಲ್ಲಿ ಟೋಲ್ ಗೇಟ್ ನಿರ್ಮಾಣಗೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ನಿರ್ದಿಷ್ಟ ಅಂತರದಲ್ಲಿ ಟೋಲ್ ಗೇಟ್ ಇದ್ದರೂ, ಇಲ್ಲಿ ಮತ್ತೊಂದು ಟೋಲ್ ಗೇಟ್ ಬೇಕೇ? ಏನೇ ಇದ್ದಾಗಲೂ ಈ ವ್ಯವಸ್ಥೆಯಿಂದ ವಾಹನ ಸವಾರರಿಗೆ ತೊಂದರೆಯಾಗಬಾರದು. ಜನಾರ್ದನ ಆಚಾರ್ಯ ಗಂಜಿಮಠ ರಿಕ್ಷಾ ಚಾಲಕ ವಿಸ್ತರಣೆಗೊಳ್ಳುತ್ತಿರುವ ಚತುಷ್ಪಥ ಹೆದ್ದಾರಿ ಯೋಜನೆ ಪ್ರಸ್ತಾವದಂತೆ ಸೂರಲ್ಪಾಡಿಯಲ್ಲಿ ಟೋಲ್ ಗೇಟ್ ಸ್ಥಾಪನೆಗೆ ಭೂಸ್ವಾಧೀನಪಡಿಸಲಾಗಿದ್ದು, ಕಾಮಗಾರಿ ಚಾಲ್ತಿಯಲ್ಲಿದೆ. ಟೋಲ್ ಗೇಟ್ ಸ್ಥಾಪನೆಗಾಗಿ ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಸಾಗುವಾಗ ಸೂರಲ್ಪಾಡಿಯಲ್ಲಿ ಬಲಕ್ಕೆ 25 ಮೀಟರ್, ಎಡಕ್ಕೆ 40 ಮೀಟರ್ ಭೂಸ್ವಾಧೀನಪಡಿಸಲಾಗಿದೆ. ಇಲ್ಲಿ 350 ಮೀಟರ್ ಉದ್ದಕ್ಕೆ ಒಟ್ಟು 65 ಮೀಟರ್ ಜಾಗದಲ್ಲಿ ಹೆದ್ದಾರಿ ವಿಸ್ತರಣೆ ಜತೆಗೆ ಟೋಲ್ ಗೇಟ್ ನಿರ್ಮಾಣಗೊಳ್ಳಲಿದೆ. ರಾ.ಹೆ ಪ್ರಾಧಿಕಾರದ ನಿಯಮದಂತೆ ಟೋಲ್ ಗೇಟ್ ನಿರ್ವಹಣೆ ಬಗ್ಗೆ ಟೆಂಡರ್ ಕರೆಯಲಾಗುತ್ತದೆ. ಟೆಂಡರ್ ಪಡೆದವರು ಟೋಲ್ ಗೇಟ್ ನಿರ್ವಹಿಸಲಿದ್ದಾರೆ. ಬೃಂಗೇಶ್ ಸರ್ವೇ ಇಂಜಿನಿಯರ್, ದುಲೀಪ್ ಬಿಲ್ಡ್‌ಕಾನ್(ಡಿಬಿಎಲ್) ಗುತ್ತಿಗೆ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net