

ದೇವದುರ್ಗ: ತಾಲೂಕಿನ ಜಾಲಹಳ್ಳಿ ಹಾಗೂ ಕಾಕರಗಲ್ ರಾಜ್ಯ ಹೆದ್ದಾರಿಯಲ್ಲಿ ಆರಂಭಿಸಿದ ಟೋಲ್‌ಗೇಟ್ ರದ್ದು ಮಾಡುವಂತೆ ಶಾಸಕಿ ಕರೆಮ್ಮ ಜಿ. ನಾಯಕ ಆದಿಯಾಗಿ ವಿವಿಧ ಸಂಘಟನೆಗಳು ಕೈಗೊಂಡ ಹೋರಾಟಕ್ಕೆ ಕೊನೆಗೂ ಸ್ಪಂದನೆ ದೊರೆತಿದೆ. ಟೋಲ್‌ಗೇಟ್ ಸಮಸ್ಯೆಗಳ ಕುರಿತು ಚರ್ಚಿಸಲು ಸರ್ಕಾರ ಬೆಂಗಳೂರಿನಲ್ಲಿ ಜು.24ರಂದು ತುರ್ತು ಸಭೆ ಕರೆದಿದೆ.
ಕಾಕರಗಲ್‌ನಲ್ಲಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದು ಸಭೆಯ ನಂತರ ಮುಂದಿನ ಹೋರಾಟ ಬಗ್ಗೆ ಚರ್ಚೆ ನಡೆಯಲಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿದ್ದು, ಶಾಸಕಿ ಕರೆಮ್ಮ ಜಿ.ನಾಯಕ, ಸಂಸದ ಜಿ.ಕುಮಾರನಾಯಕ ಸೇರಿ ಈ ಭಾಗದ ಜನಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ.
ಟೋಲ್ ಸಂಗ್ರಹದಿಂದ ಸ್ಥಳೀಯರಿಗೆ ಆಗುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಹರ್ಷ ಬಿ.ಆರ್. ತಿಳಿಸಿದ್ದಾರೆ.
ತಿಂಥಣಿ ಬ್ರಿಡ್ಜ್-ಕಲ್ಮಲಾ ರಾಜ್ಯ ಹೆದ್ದಾರಿ 73 ಕಿಮೀ ವ್ಯಾಪ್ತಿಯಲ್ಲಿ ಎರಡು ಟೋಲ್‌ಗೇಟ್ ಕೆಆರ್‌ಡಿಬಿಎಲ್‌ನಿಂದ ಆರಂಭಿಸಲಾಗಿತ್ತು. ಕೇವಲ 40 ಕಿಮೀ ವ್ಯಾಪ್ತಿಯಲ್ಲಿ ಎರಡು ಟೋಲ್ ಆರಂಭಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಟೋಲ್ ಸಮಸ್ಯೆ ಬಗ್ಗೆ ವಿಜಯವಾಣಿ ಫೋಕಸ್ ಸ್ಟೋರಿ ಮಾಡಿತ್ತು. ಇದು ಟೋಲ್ ವಿರುದ್ಧ ಜನಾಂದೋಲನ ಹೋರಾಟವಾಗಿ ರೂಪಗೊಂಡಿತ್ತು. ಅಲ್ಲದೆ ಟೋಲ್ ಮೇಲೆ ಜನರು ದಾಳಿ ನಡೆಸಿ, ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೆ ರಾಯಚೂರಿನಲ್ಲಿ ಕೆಡಿಪಿ ಸಭೆಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ನೆಲದ ಮೇಲೆ ಕುಳಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಇದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ಗೆ ಭಾರಿ ಮುಜುಗರ ಉಂಟು ಮಾಡಿತ್ತು. ಅಲ್ಲದೆ ಈ ವಿಷಯವಾಗಿ ವಿಧಾನಸೌಧದಲ್ಲಿ ಧರಣಿ ಮಾಡುವುದಾಗಿ ಕರೆಮ್ಮ ನಾಯಕ ಎಚ್ಚರಿಸಿದ್ದರು. ಇದರಿಂದ ಎಚ್ಚೆತ್ತ ಸರ್ಕಾರ ಟೋಲ್‌ಗೇಟ್ ಬಗ್ಗೆ ಚರ್ಚಿಸಲು ತುರ್ತು ಸಭೆ ಕರೆದಿದೆ.
ಶಾಸಕಿ
ಕರೆಮ್ಮ ಜಿ. ನಾಯಕ
ದೇವದುರ್ಗದ ಜನರ ಆಕ್ರೋಶಕ್ಕೆ ಮಣಿದ ಸರ್ಕಾರ ಟೋಲ್‌ಗೇಟ್ ಬಗ್ಗೆ ಚರ್ಚಿಸಲು ಜು.24ರಂದು ಬೆಂಗಳೂರಿನಲ್ಲಿ ಸಭೆ ಕರೆದಿದೆ. ನಾನು ಸಭೆಗೆ ಹಾಜರಾಗುತ್ತಿರುವ ಕಾರಣ ಟೋಲ್ ಹೋರಾಟ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಸರ್ಕಾರ ಎರಡು ಟೋಲ್ ರದ್ದು ಮಾಡದಿದ್ದರೆ ನಿರಂತರ ಹೋರಾಟ ನಡೆಸಲಾಗುವುದು. ಟೋಲ್ ದೇವದುರ್ಗದ ಜನರ ಜೀವಹಿಂಡುತ್ತಿದೆ.