

ವಿಜಯವಾಣಿ ಸುದ್ದಿಜಾಲ ಕುಂಬಳೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇತೃತ್ವದಲ್ಲಿ ಕುಂಬಳೆಯಲ್ಲಿ ನಿರ್ಮಿಸಲು ಉದ್ದೇಶಿಸಿ, ಕಾಮಗಾರಿ ಆರಂಭಗೊಳ್ಳುತ್ತಿರುವಂತೆ ಎರಡು ತಿಂಗಳ ಹಿಂದೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ವ್ಯಕ್ತವಾದ ಬಳಿಕ ನಿಲುಗಡೆಗೊಳಿಸಲಾಗಿದ್ದ ಟೋಲ್ ಪ್ಲಾಜಾ ಕಾಮಗಾರಿ ಅನಿರೀಕ್ಷಿತವಾಗಿ ಗುರುವಾರ ಸಂಜೆ ಮತ್ತೆ ಪೊಲೀಸ್ ಸಂರಕ್ಷಣೆಯಲ್ಲಿ ಪುನರಾರಂಭಗೊಂಡಿತು.
ಈ ಹಿಂದೆ ಕ್ರಿಯಾ ಸಮಿತಿಯ ತೀವ್ರ ಪ್ರತಿಭಟನೆ ಕಾರಣ ಕಾಮಗಾರಿಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿತ್ತು. ಗುರುವಾರ ಸಂಜೆ ಕಾಮಗಾರಿ ಪುನರಾರಂಭಗೊಳ್ಳುತ್ತಿರುವಂತೆ ಧಾವಿಸಿದ ಕ್ರಿಯಾ ಸಮಿತಿಯ 6 ಮಂದಿ ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿದರು. ಎ.ಕೆ.ಆರಿಫ್, ಅಶ್ರಫ್ ಕಾರ್ಲೆ, ಸಿ.ಎ.ಸುಬೈರ್, ಅನ್ವರ್ ಆರಿಕ್ಕಾಡಿ, ಲಕ್ಷ್ಮಣ ಪ್ರಭು ಕುಂಬಳೆ, ನಾಸರ್ ಮೊಗ್ರಾಲ್ ಅವರನ್ನು ಬಂಧಿಸಲಾಗಿದೆ.
ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಿದ ಬಳಿಕ ಕಾರ್ಯಕರ್ತರೊಂದಿಗೆ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಕುಂಬಳೆ ಬಳಿಯ ಅರಿಕ್ಕಾಡಿ ಸೇತುವೆ ಬಳಿ ಟೋಲ್ ಬೂತ್ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದ್ದರೂ ವಿವಿಧ ಸಂಘಟನೆಗಳು ಮತ್ತು ಟೋಲ್ ಬೂತ್ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ಟೋಲ್ ಬೂತ್‌ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ನಿಲ್ಲಿಸಬೇಕು ಎಂದು ವಿವಿಧ ಸಂಘಟನೆಗಳು ಹೈಕೋರ್ಟ್‌ಗೆ ದೂರು ನೀಡಿದ್ದವು. ನ್ಯಾಯಾಲಯ ಈ ದೂರನ್ನು ತಿರಸ್ಕರಿಸಿದ ನಂತರ, ಟೋಲ್ ಬೂತ್ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದೆ.