

ಮಂಡ್ಯ: ಬೆಂಗಳೂರಿನಲ್ಲಿ ಸಭೆ ನಡೆಸಿ ಟೋಲ್ ಸಂಗ್ರಹ ಮಾಡಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹೇಳಿದ್ದಾರೆ. ಆದರೂ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ದುಡ್ಡು ಸಂಗ್ರಹ ಮಾಡಲು ರಸ್ತೆ ಮಾಡಿದ್ದರೆ ರಾಷ್ಟ್ರೀಯ ಹೆದ್ದಾರಿಯವರು ಮುರ್ಖರು ಎಂದು ಶಾಸಕ ರವಿಕುಮಾರ್ ಗಣಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೋಲ್ ಸಂಗ್ರಹ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು. ಸಮಸ್ಯೆಗಳನ್ನು ಬಗೆಹರಿಸುವವರೆಗೆ ಟೋಲ್ ಸಂಗ್ರಹ ಮಾಡಬಾರದು ಹೇಳಲಾಗಿತ್ತು. ಕೆಲವು ಕಡೆ ಸರ್ವಿಸ್ ರಸ್ತೆ ಇಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಜನ ಸಾಯುತ್ತಿದ್ದಾರೆ ಎಂದರು.
ಟೋಲ್ ಸಂಗ್ರಹ ಎನ್ನುವುದು ದೊಡ್ಡ ಸ್ಕ್ಯಾಂ. ಕಳಪೆ ಕಾಮಗಾರಿ ಮಾಡಿ ಜನರು ಓಡಾಡೋಕೆ ಆಗುತ್ತಿಲ್ಲ. ಬೋರ್ಡ್‌ಗಳೇ ಇಲ್ಲ. ಬ್ರೇಕ್ ಹಾಕಿದರೆ ಗಾಡಿ ಎಳೆದುಕೊಂಡು ಹೋಗುತ್ತಿದೆ. ಪರಿಣಾಮ ಅಧಿಕ ಪ್ರಮಾಣದಲ್ಲಿ ಅಪಘಾತಗಳು ಆಗಿವೆ. ರೈತರ ಸಮಸ್ಯೆ ಬಗೆಹರಿಸಿ ಹಣವನ್ನಾದರೂ ಸಂಗ್ರಹಿಸಲಿ, ಮಣ್ಣಾದರೂ ಸಂಗ್ರಹಿಸಿಕೊಳ್ಳಲಿ. ಸಭೆಯಲ್ಲಿ ಜು.1ನೇ ತಾರೀಖಿನಿಂದ ಟೋಲ್ ಸಂಗ್ರಹ ಮಾಡುತ್ತೇವೆ ಎಂದಿರಲಿಲ್ಲ. ಇವರದ್ದು ಹಿಟ್ಲರ್ ಆಡಳಿತ ಆಗಿದೆ. ಅಧಿಕಾರಿಗಳಿಗೆ ಏನಾದರೂ ಹೇಳಿದರೆ ಕೇಂದ್ರ ಸರ್ಕಾರದವರಿಗೆ ಹೇಳುತ್ತೇವೆ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೋಲ್ ಸಂಗ್ರಹದ ಬಗ್ಗೆ ಸಿಎಂ ಹಾಗೂ ಸಚಿವರ ಜತೆ ಮಾತಾಡುತ್ತೇವೆ. ಒಂದು ವೇಳೆ ಶುಲ್ಕ ಸಂಗ್ರಹ ಮಾಡಿದರೆ ಮುಂದೆ ನಾವು ಏನು ಮಾಡಬೇಕು ಮಾಡುತ್ತೇವೆ. ಯಾರು ಟೋಲ್ ಹಣ ಕೊಡಬೇಡಿ ಎಂದು ಕರೆ ಕೊಡುತ್ತೇವೆ. ಬೆಂಗಳೂರು ಟೋಲ್‌ನಲ್ಲಿ ರೌಡಿಗಳಿಂದ ಶುಲ್ಕ ಸಂಗ್ರಹ ಮಾಡುತ್ತಿದ್ದಾರೆ. ಮಂಡ್ಯಗೆ ಬಂದರೆ ರೈತರು ಅವರ ನಡ ಮುರಿತಾರೆ ಎಂದರು.