ಟೋಲ್​ ಶುಲ್ಕ ಆಕರಣೆ ಸ್ಥಗಿತ

3 vikram 1
Published on

ವಿಕ್ರಮ ನಾಡಿಗೇರ ಧಾರವಾಡ
ಸಾವಿನ ಹೆದ್ದಾರಿ ಎಂದೇ ಬಿಂಬಿತವಾಗಿರುವ ಹು-ಧಾ ನಡುವಿನ ಬೈಪಾಸ್​ ರಸ್ತೆಯ ನಿರ್ವಹಣೆ ಮತ್ತು ರಸ್ತೆ ಬಳಕೆದಾರರ ಶುಲ್ಕ ಆಕರಣೆ ಇನ್ನು ಬಂದಾಗಲಿದೆ. ಈ ರಸ್ತೆ ನಿರ್ವಹಣೆ ಮಾಡುತ್ತಿದ್ದ ನಂದಿ ಹೈವೇ ಡೆವಲಪರ್ಸ್​ ಲಿಮಿಟೆಡ್​ (ಎನ್​ಎಚ್​ಡಿಎಲ್​) ಗುತ್ತಿಗೆ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಶುಲ್ಕ ಆಕರಣೆ ಸ್ಥಗಿತವಾಗಲಿದೆ.
ಹುಬ್ಬಳ್ಳಿಯ ಗಬ್ಬೂರ ಕ್ರಾಸ್​ನಿಂದ ಧಾರವಾಡ ನರೇಂದ್ರವರೆಗೆ ಸುಮಾರು 31 ಕಿ.ಮೀ ಅಂತರದ ಈ ರಸ್ತೆಯನ್ನು ಎನ್​ಎಚ್​ಡಿಎಲ್​ ಕಂಪನಿ ನಿರ್ಮಿಸಿ ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿತ್ತು. ಇದೀಗ ಗುತ್ತಿಗೆ ಅವಧಿ ಸೆ. 6ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಸೆ. 7ರ ಸಂಜೆ 6 ಗಂಟೆಯಿಂದ ಟೋಲ್​ ಸಂಗ್ರಹ ಬಂದಾಗಲಿದೆ. ಈ ವಿಷಯವಾಗಿ ಸ್ವತಃ ಎನ್​ಎಚ್​ಡಿಎಲ್​ ಘೋಷಿಸಿ, ಮಾಹಿತಿಯನ್ನು ಟೋಲ್​ ಬಳಿ ಸಹ ಅಂಟಿಸಿದೆ.
ಸಂಸ್ಥೆಯು ಬೈಪಾಸ್​ ರಸ್ತೆ ನಿರ್ಮಿಸಿ, ನಿರ್ವಹಿಸಿ ಮತ್ತು ಹಸ್ತಾಂತರಗೊಳಿಸುವ ಕಾರ್ಯಕ್ಕಾಗಿ 1998ರ ಸೆ. 5ರಂದು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. 2024ರ ಮೇ 5ರಂದೇ ಗುತ್ತಿಗೆ ಅವಧಿ ಮುಕ್ತಾಯವಾಗಿತ್ತು. ಆದರೆ ಕಂಪನಿಗೆ ಆದ ನಷ್ಟದಿಂದ ಸೆ. 6ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಆ ಅವಧಿಯೂ ರ್ಪೂಣಗೊಂಡ ಕಾರಣ ಶುಲ್ಕ ಆಕರಣೆ ನಿಲ್ಲಿಸಲಿದೆ.
ಬೆಂಗಳೂರಿನಿಂದ ಪುಣೆವರೆಗೂ ಬೈಪಾಸ್​ ರಸ್ತೆ 6 ಲೇನ್​ ಇದ್ದರೆ, ಹು-ಧಾ ನಡುವಿನ ರಸ್ತೆ ಬಾಟೆಲ್​ ನೆಕ್​ ಆಗಿದ್ದ ಕಾರಣ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದವು. 2022ರ ಜ. 15ರಂದು ಇಟ್ಟಿಗಟ್ಟಿ ಬಳಿ ಸಂಭವಿಸಿದ ಅಪಘಾತದಲ್ಲಿ 10ಕ್ಕೂ ಮಹಿಳೆಯರು ಮೃತಪಟ್ಟಿದ್ದರು. ಇದೇ ಕಾರಣಕ್ಕೆ ಈ ರಸ್ತೆಯನ್ನು ಸಾವಿನ ಹೆದ್ದಾರಿ ಎಂದೇ ಬಿಂಬಿಸಲಾಗಿತ್ತು. ಬಳಿಕ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಹೋರಾಟಗಳು ನಡೆದಿದ್ದರಿಂದ ಕೇಂದ್ರ ಸರ್ಕಾರ ಷಟ್ಪಥ ಎಕ್ಸಪ್ರೆಸ್​ ಹೈವೇ ಆಗಿ ಮಾರ್ಪಡಿಸಲು ಯೋಜನೆ ರೂಪಿಸಿದೆ.
ಸುಮಾರು 1200 ಕೋಟಿ ರೂ. ಈ ಯೋಜನೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಇನ್ನು ಕೆಲ ವರ್ಷಗಳಲ್ಲೇ ಎಕ್ಸಪ್ರೆಸ್​ ಹೈವೇ ಸಿದ್ಧವಾಗಲಿದೆ. ಹೊಸ ರಸ್ತೆ ನಿರ್ಮಾಣ ಬಳಿಕ ಗುತ್ತಿಗೆ ಪಡೆದ ಕಂಪನಿ ನಿರ್ವಹಣೆ ಜವಾಬ್ದಾರಿಯನ್ನೂ ಹೊರಲಿದೆ. ಆದರೆ ಅಲ್ಲಿಯವರೆಗೆ ರಸ್ತೆ ನಿರ್ವಹಣೆ, ಅಲ್ಲಿ ಸಂಭವಿಸುವ ಅವಡಗಳಿಗೆ ಯಾರು ಹೊಣೆ? ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಜನರೇ ಎಚ್ಚರ ವಹಿಸಿ: ಎನ್​ಎಚ್​ಡಿಎಲ್​ ಕಂಪನಿ ಟೋಲ್​ ಸಂಗ್ರಹಣೆ ಸ್ಥಗಿತದ ಜತೆಗೆ ಶುಲ್ಕ ಆಕರಣೆ, ಇತರ ಕಾರ್ಯಗಳನ್ನು ನಿಭಾಯಿಸಲು ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಗಳನ್ನು ಸಹ ಸೇವೆಯಿಂದ ಬಿಡುಗಡೆ ಮಾಡಲು ಮುಂದಾಗಿದೆ. ಸೆ. 7ರ ನಂತರ ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆ ಮಾಡಲಿದೆ. ಆದಾಗ್ಯೂ ಕೆಲವರು ಕಂಪನಿ ಹೆಸರಲ್ಲಿ ಟೋಲ್​ ಸಂಗ್ರಹ ನೆಪದಲ್ಲಿ ಹಣ ದೋಚುವ ಸಾಧ್ಯತೆ ಹೆಚ್ಚಿದೆ. ಟೋಲ್​ ಬಂದಾಗುವುದರಿಂದ ಆ ರಸ್ತೆಯಲ್ಲಿ ಸಂಚರಿಸುವ ಸವಾರರು ಯಾರಿಗೂ ಹಣ ನೀಡಬೇಕಿಲ್ಲ. ಹೀಗಾಗಿ ಜನರು ಎಚ್ಚರ ವಹಿಸಬೇಕಿದೆ.

ನಾವು ಹೊಣೆಗಾರರಲ್ಲಸೆ. 7ರ ಸಂಜೆ 6 ಗಂಟೆಯಿಂದ ಟೋಲ್​ ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗುವುದು. ನಂತರದಲ್ಲಿ ಬೈಪಾಸ್​ನಲ್ಲಿ ವಾಹನ ಸಂಚಾರದಲ್ಲಿ ಉಂಟಾಗುವ ಅಡೆ-ತಡೆ, ಅಪಘಾತಗಳು ಹಾಗೂ ಇತರ ಘಟನೆಗಳು ಸಂಭವಿಸಿದರೆ, ತೆರವುಗೊಳಿಸುವ ಜವಾಬ್ದಾರಿ ಎನ್​ಎಚ್​ಡಿಎಲ್​ ಕಂಪನಿಯದ್ದಲ್ಲ ಎಂಬ ಮಾಹಿತಿಯನ್ನು ಸಂಸ್ಥೆ ವತಿಯಿಂದ ಟೋಲ್​ ಬಳಿ ಸಾರ್ವಜನಿಕ ಪ್ರಕಟಣೆ ಅಂಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net