

ದೇವದುರ್ಗ: ತಾಲೂಕಿನ ಎರಡು ಕಡೆ ಅವೈಜ್ಞಾನಿಕವಾಗಿ ಆರಂಭಿಸಿರುವ ಟೋಲ್‌ಗೇಟ್‌ಗಳನ್ನು ರದ್ದುಮಾಡುವಂತೆ ಒತ್ತಾಯಿಸಿ ಕಾಕರಗಲ್ ಟೋಲ್‌ಗೇಟ್ ಮುಂದೆ ರೈತ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.
ರಾಜ್ಯದಲ್ಲೇ ದೇವದುರ್ಗ ಅತ್ಯಂತ ಹಿಂದುಳಿದ ತಾಲೂಕಾಗಿದೆ. ಇಲ್ಲಿ ಬಡತನ, ಅನಕ್ಷರತೆ, ಅಪೌಷ್ಟಿಕತೆ ತಾಂಡವವಾಡುತ್ತಿದೆ. ಅಭಿವೃದ್ಧಿ, ಮೂಲ ಸೌಲಭ್ಯ ಎನ್ನುವುದು ಕಣ್ಮರೆಯಾಗಿದ್ದು ಜನರು ಸಮಸ್ಯೆ ಸುಳಿಯಲ್ಲಿ ನರಳುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಕಲ್ಮಲಾ ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ಎರಡು ಕಡೆ ಟೋಲ್‌ಗೇಟ್ ನಿರ್ಮಾಣ ಮಾಡಿ ವಸೂಲಿಗೆ ಮುಂದಾಗಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಹಳ್ಳಿಗಳು, ತಾಂಡಾ, ದೊಡ್ಡಿಗಳು ಹೆಚ್ಚಿದ್ದು ಜನರು ಕೆಲಸವಿಲ್ಲದೆ ಗುಳೆ ಹೋಗುತ್ತಿದ್ದಾರೆ. ಶೇ.80 ರೈತರು, ಕೂಲಿಕಾರರಿದ್ದು ನಿತ್ಯ ಹೊಲಮನೆಗೆ ಹಲವು ಸಲ ಓಡಾಡುತ್ತಾರೆ. ಅಗತ್ಯ ವಸ್ತುಗಳ ಸಾಗಣೆ, ಕೃಷಿ ಉಪಕರಣಗಳು, ನಾಟಿ ಮಾಡಲು, ರಾಶಿ ಮಾಡಲು, ಸಂತೆಗೆ ಕುರಿ, ಮೇಕೆ, ಹಸು ಮಾರಾಟ ಹಾಗೂ ಖರೀದಿ ಮಾಡಲು ಓಡಾಡುತ್ತಾರೆ. ಪ್ರತಿಸಲ ಟೋಲ್ ವಸೂಲಿ ಮಾಡುವುದರಿಂದ ಬಡವರು ಜೀವನ ನಡೆಸುವುದೇ ದುಸ್ತರವಾಗಲಿದೆ ಎಂದು ದೂರಿದರು.
ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಎರಡು ಟೋಲ್‌ಗೇಟ್‌ಗಳನ್ನು ರದ್ದುಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ರೈತರ ಜತೆಗೂಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಮನಿ, ತಾಲೂಕು ಅಧ್ಯಕ್ಷ ಕೆ.ಗಿರಿಲಿಂಗ ಸ್ವಾಮಿ, ಪ್ರಧಾನ ಕಾರ್ಯದರ್ಶಿ ದುರುಗಣ್ಣ ಇರಬಗೇರಾ, ಬಾಬು ದುಬೈ, ರಮೇಶ, ಸಿದ್ದಲಿಂಗಪ್ಪ, ಮಲ್ಲೇಶ, ಸದಾಶಿವ ಇತರರಿದ್ದರು.