

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬೈ ಪಾಸ್ ಮಾರ್ಗದಲ್ಲಿ ಟೋಲ್ ಸಂಗ್ರಹಿಸುವ ಅವಧಿ ಜೂನ್ 23ರವರೆಗೆ ವಿಸ್ತರಣೆಗೊಂಡಿದೆ. ಇದು ಮೇ 6ರಂದು ಕೊನೆಗೊಳ್ಳಬೇಕಿತ್ತು.
ಹುಬ್ಬಳ್ಳಿ-ಧಾರವಾಡ ದ್ವಿಪಥ ರಸ್ತೆ (ಬೈಪಾಸ್) ನಿರ್ವಿುಸಿ ಈ ಮಾರ್ಗದಲ್ಲಿ ಹಾದು ಹೋಗುವ ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ (ಎನ್ಎಚ್ಡಿಎಲ್)ಗೆ ಕೇಂದ್ರ ಸರ್ಕಾರದ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವಾಲಯವು ಅವಧಿ ವಿಸ್ತರಣೆ ಮಾಡಿಕೊಟ್ಟಿದೆ.
‘ನೋಟ್ಗಳ ಅಮಾನ್ಯೀಕರಣ ಹಾಗೂ ಕರೊನಾ ಕಾಲಘಟ್ಟದಲ್ಲಿ ಟೋಲ್ ಸಂಗ್ರಹ ಬಹಳ ಕಡಿಮೆ ಇತ್ತು. ಇದರಿಂದ ಆದಾಯ ನಷ್ಟವಾಗಿದ್ದು, ಈ ಮಾರ್ಗದಲ್ಲಿ ಟೋಲ್ ಸಂಗ್ರಹಿಸಲು ಇನ್ನಷ್ಟು ಕಾಲಾವಧಿ ನೀಡಬೇಕೆಂದು ಎನ್ಎಚ್ಡಿಎಲ್ ಸಚಿವಾಲಯಕ್ಕೆ ಮನವಿ ಮಾಡಿತ್ತು. ಅವರ ಮನವಿಯನ್ನು ಸಚಿವಾಲಯ ಪುರಸ್ಕರಿಸಿದೆ’ ಎಂದು ಲೋಕೋಪಯೋಗಿ ಇಲಾಖೆ (ರಾಷ್ಟ್ರೀಯ ಹೆದ್ದಾರಿ ವಿಭಾಗ ಹುಬ್ಬಳ್ಳಿ)ಯ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಜಿ. ಗುಂಡಳ್ಳಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಹು-ಧಾ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ 1998ರಲ್ಲಿ ಪೂರ್ಣಗೊಂಡಿತ್ತು. 2000ದಿಂದ ಟೋಲ್ ಸಂಗ್ರಹ ಜಾರಿಯಲ್ಲಿದೆ. 31.6 ಕಿಲೋ ಮೀಟರ್ ಮಾರ್ಗದಲ್ಲಿ ಹುಬ್ಬಳ್ಳಿ ಗಬ್ಬೂರ್ ಹಾಗೂ ಧಾರವಾಡ ನರೇಂದ್ರದಲ್ಲಿ ಮುಖ್ಯ ಟೋಲ್ ಗೇಟ್ಗಳು ಹಾಗೂ ನಾಲ್ಕು ಇಂಟರ್ಚೇಂಜರ್ ಗಳಿವೆ.
ಈಗಿರುವ ದ್ವಿಪಥ ರಸ್ತೆಯನ್ನು ಅಷ್ಟಪಥವನ್ನಾಗಿ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ.