ಬಾಗಿಲು ತೆರೆಯದ ಸುಲಭ ಶೌಚಗೃಹ

28srt-1
Published on

ಶಿರಹಟ್ಟಿ: ಪಟ್ಟಣ ಪಂಚಾಯಿತಿ ವಾರ್ಡ್ ನಂ. 1ರ ವ್ಯಾಪ್ತಿಯ ಖಾನಾಪುರ ಗ್ರಾಮದಲ್ಲಿ 10 ವರ್ಷಗಳ ಹಿಂದೆ ನಿರ್ವಿುಸಿದ ಸುಲಭ ಶೌಚಗೃಹ (ಮಹಿಳೆಯರ ಗೌರವ ಘಟಕ) ಈವರೆಗೂ ಬಾಗಿಲು ತೆರೆದಿಲ್ಲ. ಇದರಿಂದ ಮಹಿಳೆಯರು ಬಯಲು ಶೌಚದ ಗೋಳಿನಿಂದ ರೋಸಿ ಹೋಗಿದ್ದಾರೆ.

ಗ್ರಾಮದಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ 12 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಲಭ ಶೌಚಗೃಹ ನಿರ್ವಿುಸಿ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಲಾಯಿತು. ಉಳಿದ ಸೌಲಭ್ಯಗಳನ್ನು ‘ಆಮೇಲೆ ನೋಡಿದರಾಯಿತು’ ಎಂಬ ತೀರ್ವನದೊಂದಿಗೆ ಕಟ್ಟಡದ ಬಾಗಿಲಿಗೆ ಬೀಗ ಜಡಿದು ಬಿಡಲಾಯಿತು. ಆದರೆ, ಈವರೆಗೂ ಶೌಚಗೃಹ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇಂದಲ್ಲ, ನಾಳೆ ಪ್ರಯೋಜನಕ್ಕೆ ಬರಬಹುದೆಂದು ಕಾದಿದ್ದ ಮಹಿಳೆಯರ ನಿರೀಕ್ಷೆ ಹುಸಿಯಾಗಿದೆ. ಬಹಿರ್ದೆಸೆಗೆ ನಿತ್ಯ ಊರಾಚೆ ಬಯಲು ಆಶ್ರಯಿಸುವ ಗೋಳು ತಪ್ಪಿಲ್ಲ.

ಪಟ್ಟಣದ ವಿವಿಧೆಡೆ ನಿರ್ವಿುಸಿದ ಸಾಮೂಹಿಕ ಶೌಚಗೃಹಗಳು ಸೌಲಭ್ಯ, ನಿರ್ವಹಣೆ ಕೊರತೆಯಿಂದ ಹಾಲಾಗಿವೆ. ಕೆಲವೆಡೆ ಹೈಟೆಕ್ ಟಾಯ್ಲೆಟ್, ಸಿಂಟೆಕ್ಸ್, ನಲ್ಲಿ, ಪೈಪ್ ಕಳ್ಳತನವಾಗಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿವೆ.

ಗ್ರಾಮದ ಹೊರವಲಯದಲ್ಲಿನ ಸುಲಭ ಶೌಚಗೃಹ ಕಾರ್ಯಾರಂಭಕ್ಕೆ ಪಪಂ ಆಡಳಿತ ಮಂಡಳಿ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮದ ಮಹಿಳೆಯರೊಂದಿಗೆ ಪಪಂ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥ ರಾಜು ಛಬ್ಬಿ ಹಾಗೂ ಇತರರು ಎಚ್ಚರಿಕೆ ನೀಡಿದ್ದಾರೆ.

ಶೌಚಗೃಹಕ್ಕೆ ನೀರು ಪೂರೈಕೆ ಅಗತ್ಯ. ಬೋರ್​ವೆಲ್ ವ್ಯವಸ್ಥೆ ಕಾರ್ಯ ತಡವಾಗಿ ಆಯಿತು. ಇನ್ನುಳಿದ ಸೌಲಭ್ಯ ಕಲ್ಪಿಸಲು ಅನುದಾನ ಪಡೆಯಲಾಗಿದೆ. ನೀರು ಸಂಗ್ರಹಕ್ಕೆ ಸಿಂಟೆಕ್ಸ್ ಜೋಡಿಸಿ ಎಲ್ಲ ವ್ಯವಸ್ಥೆಯೊಂದಿಗೆ ಸಾರ್ವಜನಿಕರ ಅನುಕೂಲಕ್ಕೆ ಬೀಗ ತೆರವು ಮಾಡಲಾಗುವುದು. ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ಹೀಗಾಗಿ ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. | ಎನ್.ಎಂ. ಹಾದಿಮನಿ ಶಿರಹಟ್ಟಿ ಪಟ್ಟಣ ಪಂಚಾಯಿತಿ ಆರೋಗ್ಯ ಹಿರಿಯ ನಿರೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net