ಕಾಲಿಟ್ಟರೆ ತಲೆಸುತ್ತಿ ಬೀಳುವುದು ಗ್ಯಾರಂಟಿ!

to
Published on

 ಶಿವೂ ತೂಬಗೆರೆ

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಸಾರ್ವಜನಿಕ ಶೌಚಗೃಹದ ಅವ್ಯವಸ್ಥೆ ಹೇಳತೀರದಾಗಿದೆ. ನಿರ್ವಹಣೆ ಕೊರತೆ ಎದುರಿಸುತ್ತಿರುವ ಈ ಶೌಚಗೃಹ ರೋಗರುಜಿನ ಹರಡುವ ತಾಣವಾಗಿ ಪರಿವರ್ತಿತವಾಗಿದೆ.

ಹೋಬಳಿ ಕೇಂದ್ರದಲ್ಲಿರುವ ಈ ಸಾರ್ವಜನಿಕ ಶೌಚಗೃಹದ ಅವ್ಯವಸ್ಥೆ ಹೇಗಿದೆ ಎಂದರೆ ಯಾರಾದರೂ ಒಳಗೆ ಕಾಲಿಟ್ಟರೆ ಗಬ್ಬುನಾರುತ್ತಿರುವ ವಾಸನೆಗೆ ತಲೆಸುತ್ತಿ ಬೀಳುವುದು ಗ್ಯಾರಂಟಿ ಎಂಬಂತ ವಾತಾವರಣವಿದೆ. ಹೆಸರಿಗಷ್ಟೇ ಶೌಚಗೃಹವಾಗಿದ್ದು ಬಳಕೆಗೆ ಸೂಕ್ತವಾಗಿಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಪಾಠ ಮಾಡುವ ಪಂಚಾಯಿತಿ ಸಾರ್ವಜನಿಕ ಶೌಚಗೃಹದ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಹಲವು ಬಾರಿ ಪಂಚಾಯಿತಿಗೆ ದೂರು ನೀಡಿದ್ದರೂ ಸಿಬ್ಬಂದಿ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದೆ.

ಸ್ವಚ್ಛಭಾರತ್ ಹೆಸರಿಗೇ ಕಳಂಕ: ಸಮುದಾಯ ಶೌಚಗೃಹ ಹಾಗೂ ಸ್ನಾನದ ಗೃಹ ಎಂದು ದೊಡ್ಡ ನಾಮಲಕ ಹಾಕಲಾಗಿದೆ, ಇದರ ಮೇಲೆಯೇ ಸ್ವಚ್ಛಭಾರತ್ ಎಂಬ ಹೆಸರು ಎದ್ದು ಕಾಣುತ್ತಿದೆ, ಆದರೆ ಇಲ್ಲಿನ ಅನೈರ್ಮಲ್ಯ ಸ್ವಚ್ಛಭಾರತ್ ಹೆಸರಿಗೆ ಕಳಂಕ ತರುವಂತಿದೆ. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹದ ಕೊಠಡಿಗಳಿವೆ ದುರಂತವೆಂದರೆ ಈ ಎರಡೂ ಕಡೆ ಸಾಗುವ ಮೆಟ್ಟುಲುಗಳ ಬಳಿಯೇ ಗಿಡಗಂಡಿಗಳು ಬೆಳೆದಿದ್ದರೂ ಕನಿಷ್ಟ ಇವುಗಳನ್ನು ತೆರವು ಮಾಡುವ ಕೆಲಸವನ್ನೂ ಮಾಡಿಲ್ಲ. ಅಪ್ಪಿತಪ್ಪಿ ಅನಿವಾರ್ಯವಾಗಿ ಶೌಚಗೃಹ ಪ್ರವೇಶಿಸಬೇಕಾದರೆ ಗಿಡಗಂಟಿಯನ್ನು ದಾಟಬೇಕಾದ ಪರಿಸ್ಥಿತಿ ಇದೆ. ಶೌಚಗೃಹ ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದುನಿಂತಿದ್ದು ಹಾವು ಮತ್ತಿತರ ಸರೀಸೃಪಗಳು ಹೆದರಿಯೂ ಕಾಡುತ್ತಿದೆ.

ಶಿಥಿಲಗೊಂಡಿರುವ ಕಟ್ಟಡ: ಸಾರ್ವಜನಿಕ ಶೌಚಗೃಹದ ಕಟ್ಟಡ ನಿರ್ಮಾಣವಾಗಿ ಸುಮಾರು 10 ವರ್ಷ ಕಳೆದಿದೆ ಆದರೆ ಕಳಪೆ ಕಾಮಗಾರಿಯ ಲವಾಗಿ ಈಗಾಗಲೇ 100 ವರ್ಷದಷ್ಟು ಹಳೆ ಕಟ್ಟಡದಂತೆ ಭಾಸವಾಗುತ್ತಿದೆ. ಕಟ್ಟಡದ ಗೋಡೆಗಳಲ್ಲಿ ನೀರು ಜಿನುಗುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಕಟ್ಟಡ ಕುಸಿದುಬೀಳುವ ಅಪಾಯವಿದೆ ಎಂಬಂತ ಪರಿಸ್ಥಿತಿ ಕಂಡುಬರುತ್ತಿದೆ. ಇನ್ನು ಒಳಗೆ ಪ್ರವೇಶಿಸಿದರೆ ಪ್ಲಾಸ್ಟಿಕ್ ಬಾಟಲಿಗಳು, ಬೀಡಿಸಿಗರೇಟ್ ಮದ್ಯದ ಪ್ಯಾಕೇಟ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡಬರುತ್ತಿದ್ದು, ಈ ಕಟ್ಟಡ ಶೌಚಗೃಹವಾಗಿ ಬಳಕೆಯಾಗುತ್ತಿರುವುದೇ ಅನುಮಾನ ಎಂಬ ವಾತಾವರಣ ಕಂಡುಬರುತ್ತಿದೆ. ಶೌಚಗೃಹಗಳಿಗೆ ಬಳಸುವ ಕಮೋಡ್‌ಗಳು ಸ್ವಚ್ಛತೆ ಕಂಡು ಎಷ್ಟೂ ವರ್ಷಗಳಾಂತಿವೆ. ಒಳಗೆ ಕಾಲಿಟ್ಟರೆ ಉಸಿರುಕಟ್ಟುವಂತ ವಾತಾವರಣವಿರುವುದರಿಂದ ಸಾರ್ವಜನಿಕರು ಶೌಚಗೃಹ ಬಳಕೆಗೆ ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾರು ತೆರೆಯುತ್ತಾರೆ? ಯಾರೂ ಮುಚ್ಚುತ್ತಾರೆ ಗೊತ್ತಿಲ್ಲ: ತೂಬಗೆರೆ ಬಸ್‌ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ಸಮುದಾಯ ಶೌಚಗೃಹದ ಬಾಗಿಲನ್ನು ಯಾರೂ ತೆರೆಯುತ್ತಾರೆ? ಯಾರೂ ಮುಚ್ಚುತ್ತಾರೆ ಎಂಬುದರ ಮಾಹಿತಿಯೇ ಇಲ್ಲ. ಎಷ್ಟು ಬಾರಿ ವಾರಗಟ್ಟಲೆ ಬೀಗ ಹಾಕಿರುತ್ತದೆ, ಇದ್ದಕ್ಕಿದ್ದಂತೆ ತೆರೆದಿರುತ್ತದೆ ಎಂಬುದು ಸ್ಥಳೀಯರ ಆರೋಪವಾಗಿದೆ. ನಿರ್ವಹಣೆ ಹೊಣೆ ಹೊತ್ತ ಪಂಚಾಯಿತಿ ಜಾಣಕುರುಡು ಪ್ರದರ್ಶಿಸುತ್ತಿದ್ದು ಸಾರ್ವಜನಿಕರು ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ.

 ಶಿಥಿಲಗೊಂಡಿರುವ ಬಸ್‌ತಂಗುದಾಣ:

ಸಾರ್ವಜನಿಕ ಶೌಚಗೃಹದ ದುಸ್ಥಿತಿ ಒಂದೆಡೆಯಾದರೆ ಇಲ್ಲಿನ ಬಸ್ ತಂಗುದಾಣದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಈಗಾಗಲೇ ಬಸ್ ತಂಗುದಾಣದ ಶಿಥಿಲಾವಸ್ಥೆ ತಲುಪಿದೆ. ಬಣ್ಣ ಕಳೆದುಕೊಂಡಿದೆ. ಬೀಡಿ ಸಿಗರೇಟು, ಪ್ಲಾಸ್ಟಿಕ್ ಸೇರಿ ಕಸದ ತಾಣವಾಗಿ ರೂಪುಗೊಂಡಿದೆ. ಪ್ರಯಾಣಿಕರ‌್ಯಾರು ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲವೆಂಬಂತ ಪರಿಸ್ಥಿತಿ ಎದುರಿಸುತ್ತಿದೆ.

--

ತೂಬಗೆರೆ ಬಸ್ ನಿಲ್ದಾಣ ಸುಮಾರು 500 ಮೀಟರ್ ಇದೆ ಎನ್ನುವಷ್ಟರಲ್ಲಿ ಬಸ್ ಪ್ರಯಾಣಿಕರು ತಟ್ಟನೆ ಮೂಗುಮುಚ್ಚಿಕೊಳ್ಳುತ್ತಾರೆ. ಬಸ್ ಇಳಿದು ಅಷ್ಟೇ ದೂರ ಹೋಗುವವರೆಗೆ ಮುಚ್ಚಿದ ಮೂಗನ್ನು ಬಿಡುವಂತೆಯೇ ಇಲ್ಲ. ಅಷ್ಟು ಗಬ್ಬುನಾರುತ್ತಿದೆ ಈ ಸಾರ್ವಜನಿಕ ಶೌಚಗೃಹ, ಹೋಬಳಿ ಕೇಂದ್ರದಲ್ಲಿಯೇ ಇಂಥ ಪರಿಸ್ಥಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ.

ರವಿಕುಮಾರ್, ತೂಬಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net