

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಕುಂದಾಣ
ಗ್ರಾಮೀಣ ಭಾಗದಲ್ಲಿ ಬಯಲು ಶೌಚ ಪದ್ಧತಿ ನಿರ್ಮೂಲನೆ ಮಾಡಲು ಜಿಲ್ಲಾಡಳಿತ ಕಸರತ್ತು ನಡೆಸುತ್ತಿದೆ ಆದರೆ ಇಂದಿಗೂ ಹಲವು ಕಡೆಗಳಲ್ಲಿ ಬಯಲು ಶೌಚಕ್ಕೆ ಮುಕ್ತಿ ದೊರೆತಿಲ್ಲ. ಸರ್ಕಾರದ ಯೋಜನೆಯ ಮಾಹಿತಿ ಕೊರತೆ, ಮಧ್ಯವರ್ತಿಗಳ ಹಾವಳಿ, ಅಧಿಕಾರಿಗಳ ನಿರ್ಲಕ್ಷ್ಯದ ಲವಾಗಿ ಅನೇಕರು ಯೋಜನೆಯಿಂದ ವಂಚಿತರಾಗಿದ್ದಾರೆ.
ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಇಂಥ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿಬರುತ್ತಿದೆ, ಮುಖ್ಯವಾಗಿ ತಾಲೂಕಿನ ಕುಂದಾಣ ಹೋಬಳಿಯ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇಂದಿಗೂ ಬಯಲು ಶೌಚ ಕಂಡುಬರುತ್ತಿದ್ದು, ಬಯಲು ಶೌಚಮುಕ್ತ ಸಮಾಜ ನಿರ್ಮಾಣದ ಗುರಿ ತಲುಪಲು ಜಿಲ್ಲಾಡಳಿತ ವಿಲವಾದಂತಾಗಿದೆ.
ಆಂದೋಲನದಲ್ಲೇ ಮನವಿ: ಇತ್ತೀಚಿಗೆ ಕುಂದಾಣ ಕೊಪ್ಪಲಿನಲ್ಲಿ ‘ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ’ ಹಮ್ಮಿಕೊಳ್ಳಲಾಗಿತ್ತು. ವಿಶ್ವ ಶೌಚದಿನದ ಅಂಗವಾಗಿ ಶೌಚಗೃಹದ ಮಹತ್ವ ಸಾರುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲೇ ಮಹಿಳೆಯೊಬ್ಬರು ನಮಗೆ ಶೌಚಗೃಹ ಇಲ್ಲ, ಸಾಕಷ್ಟು ಬಾರಿ ಪಂಚಾಯಿತಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ, ಇಂದಿಗೂ ತಾತ್ಕಾಲಿಕ ಶೆಡ್‌ನಲ್ಲಿ ಶೌಚಗೃಹ ನಿರ್ಮಿಸಿಕೊಂಡಿದ್ದೇವೆ ಎಂದು ಅಳಲು ತೋಡಿಕೊಂಡ ಪ್ರಸಂಗ ನಡೆದಿರುವುದು ಇದಕ್ಕೆ ಪ್ರತ್ಯಕ್ಷ ನಿದರ್ಶನವಾಗಿದೆ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳ ಬಳಿ ಮನವಿ ಮಾಡಿಕೊಳ್ಳುವುದಷ್ಟೇ ಆಗಿದೆ ಆದರೆ ಪರಿಸ್ಥಿತಿ ಬದಲಾಗಿಲ್ಲ ಎಂಬ ಅಳಲು ಕೇಳಿಬಂದಿದೆ.
ಸಬೂಬುಗಳೇ ಕಾರಣ: ಗ್ರಾಮಸ್ಥರು ತಮ್ಮ ಮನೆ ಬಳಿಯೇ ಶೌಚಗೃಹ ನಿರ್ಮಿಸಿಕೊಳ್ಳಬಹುದು ಇದಕ್ಕಾಗಿ ಸರ್ಕಾರದಿಂದ 20 ಸಾವಿರ ರೂ.ಧನ ಸಹಾಯ ದೊರೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಅರ್ಜಿ ಹಿಡಿದು ಹೋದರೆ ನೂರಾರು ಸಬೂಬು ಹೇಳುತ್ತಾರೆ. ದಾಖಲೆ ಸರಿಯಿಲ್ಲ ಎಂದು ಹೇಳುತ್ತಾರೆ, ಕೆಲವು ಮಧ್ಯವರ್ತಿಗಳು ಲಂಚಕೊಟ್ಟರೆ ಕೆಲಸ ಆಗುತ್ತೆ ಎನ್ನುತ್ತಾರೆ, ಅಧಿಕಾರಿಗಳು ಸಹ ನಿರ್ಲಕ್ಷ್ಯ ವಹಿಸುತ್ತಾರೆ ಎಂಬುದು ಅನೇಕರ ಆರೋಪವಾಗಿದೆ. ಗ್ರಾಮೀಣ ಪ್ರದೇಶದ ಅನಕ್ಷರಸ್ಥ ಹಿರಿಯ ನಾಗರೀಕರ ಅಳಲು ಕೇಳುವವರು ಇಲ್ಲದಂತಾಗಿದೆ. ಪಂಚಾಯಿತಿ ಸಿಬ್ಬಂದಿಯೂ ಈ ಯೋಜನೆಯನ್ನು ವೇದಿಕೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
----------
ಉದ್ದೇಶಕ್ಕೆ ಎಳ್ಳುನೀರು: ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಶೌಚಗೃಹ ನಿರ್ಮಾಣ ಮಾಡಿಕೊಳ್ಳಬೇಕು, ಈ ಮೂಲಕ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗಗಳಲ್ಲಿ ತಡೆಗಟ್ಟವುದು. ಬಯರ್ದೆಸೆ ಮುಕ್ತ ವಾತಾವರಣ ನಿರ್ಮಿಸಿರುವುದು ವಿಶ್ವ ಶೌಚಗೃಹದ ಪ್ರಮುಖ ಉದ್ದೇಶವಾಗಿದೆ. ಸ್ವಚ್ಛತೆಯಲ್ಲಿ ಗ್ರಾಮಗಳು ಮಾದರಿಯಾಗಬೇಕು ಎಂಬುದು ಸರ್ಕಾರದ ಯೋಜನೆಯ ಪ್ರಮುಖ ಧ್ಯೇಯೋದ್ದೇಶವಾಗಿದೆ ಆದರೆ ಅಧಿಕಾರಿಗಳ ನಿರ್ಲಕ್ಷ್ಯ, ಮಾಹಿತಿ ಕೊರತೆ ಉದ್ದೇಶಕ್ಕೆ ಎಳ್ಳುನೀರು ಬಿಡುತ್ತಿದೆ ಎಂಬ ಆರೋಪ ದಟ್ಟವಾಗಿದೆ.
ಜಿಲ್ಲೆಯಲ್ಲಿ 2.10 ಲಕ್ಷ ಶೌಚಗೃಹಗಳನ್ನು ಗುರುತಿಸಲಾಗಿದ್ದು, 53 ಸಾವಿರ ಶೌಚಗೃಹಗಳಿಗೆ ಅನುದಾನ ನೀಡಲಾಗಿದೆ. ಶಾಲಾ ಅಥವಾ ಅಂಗವಾಡಿ ಕೇಂದ್ರಗಳಲ್ಲಿನ ಉತ್ತಮ ನಿರ್ವಹಣೆಯ ಸಮುದಾಯ ಶೌಚಗೃಹಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಶೌಚಗೃಹ ನಿರ್ಮಾಣಕ್ಕೆ ಅಗತ್ಯ ನೆರವು ಸಿಗಲಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಬೇಕು.
ಟಿ.ಕೆ.ರಮೇಶ್, ಜಿಪಂ ಉಪಕಾರ್ಯದರ್ಶಿ
-----------
ಶೌಚಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ ಇದುವರೆಗೆ ಯಾರೂ ಈ ಬಗ್ಗೆ ಗಮನ ನೀಡಿಲ್ಲ. ಹಾಗಾಗಿ ಮನೆಯ ಬಳಿ ತಾತ್ಕಾಲಿವಾಗಿ ಶೆಡ್ ಹಾಕಿಕೊಂಡು ಅಲ್ಲಿಯೇ ಸ್ನಾಹಗೃಹ ಹಾಗೂ ಶೌಚಗೃಹಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇನೆ. ಈ ಹಿಂದಿನ ಹಲವು ಪಿಡಿಒಗಳಿಗೆ ಮನವಿ ಮಾಡಿದ್ದೆ ಏನು ಪ್ರಯೋಜವಾಗಿಲ್ಲ. ಈಗ ಹೊಸಬರು ಬಂದಿದ್ದಾರೆ ಅವರಿಂದಾದರೂ ಸಹಾಯವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ.
ಲಕ್ಷ್ಮಮ್ಮ, ಕುಂದಾಣ ಕೊಪ್ಪಲು ನಿವಾಸಿ,