

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಶೌಚಗೃಹಕ್ಕೆ ನೀರು ಸರಬರಾಜು ಇಲ್ಲದೆ ಬಂದ್ ಆಗಿರುವುದರಿಂದ ಪ್ರವಾಸಿಗರು ಪರದಾಡುವಂತಾಗಿದೆ.
ಬಂಡೀಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗಟ್ಟಲೆ ಪ್ರಯಾಣಿಸುವ ಪ್ರವಾಸಿಗರು ನಿಸರ್ಗ ಕರೆಗಾಗಿ ಅರಣ್ಯದ ರಸ್ತೆ ಬದಿಗಳಲ್ಲಿ ವಾಹನ ನಿಲ್ಲಿಸಿ ಕಾಡಿನೊಳಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಆನೆ ಮುಂತಾದ ವನ್ಯಜೀವಿಗಳ ದಾಳಿಗೆ ಒಳಗಾಗಿ ಪ್ರಾಣಾಪಾಯಕ್ಕೆ ಸಿಲುಕುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಳೆದ ವರ್ಷ ತನ್ನ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳಲ್ಲಿ ಸುಸಜ್ಜಿತ ಶೌಚಗೃಹಗಳನ್ನು ನಿರ್ಮಿಸಿತ್ತು.
ಕೇರಳ ರಸ್ತೆಯ ಮೂಲೆಹೊಳೆ, ಮದ್ದೂರು, ಊಟಿ ರಸ್ತೆಯ ಮೇಲುಕಾಮನಹಳ್ಳಿ ಹಾಗೂ ಕೆಕ್ಕನಹಳ್ಳಗಳಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಿಸಿ ಬಳಕೆಗೆ ತಂದಿತ್ತು. ವಿದ್ಯುತ್ ಸಂಪರ್ಕ ಇಲ್ಲದ ಮೂಲೆಹೊಳೆ ಮತ್ತು ಕೆಕ್ಕನಹಳ್ಳದಲ್ಲಿ ಸೋಲಾರ್ ಅಳವಡಿಸಿ ನೀರು ದೊರಕುವಂತೆ ಮಾಡಿತ್ತು. ಅಲ್ಲದೆ ಇವುಗಳಿಗೆ ನೀರಿನ ಸಂಪರ್ಕ ನೀಡಿ ಪೌರ ಕಾರ್ಮಿಕರಿಗೆ ನಿರ್ವಹಣೆಯ ಹೊಣೆ ನೀಡಿತ್ತು.
ಇದರಿಂದ ಅರಣ್ಯ ಮಾರ್ಗದಲ್ಲಿ ವಾಹನ ನಿಲ್ಲಿಸುತ್ತಿದ್ದ ಪ್ರವಾಸಿಗರು ಇವುಗಳನ್ನು ಬಳಸಿಕೊಳ್ಳುವ ಮೂಲಕ ನಿಸರ್ಗದ ಕರೆಗಾಗಿ ಕೆಳಗಿಳಿಯುವ ಅಪಾಯದಿಂದ ಪಾರಾಗಿದ್ದರು. ಆದರೆ ಊಟಿ ರಸ್ತೆಯ ಕೆಕ್ಕನಹಳ್ಳದಲ್ಲಿ ಬಾವಿಯಿಂದ ನೀರೆತ್ತಲು ಬಳಕೆಯಾಗುತ್ತಿದ್ದ ಮೋಟಾರು ಕೆಟ್ಟಿದ್ದರಿಂದ ಕಳೆದ ಒಂದು ವಾರದಿಂದ ಶೌಚಗೃಹಕ್ಕೆ ಬೀಗ ಜಡಿಯಲಾಗಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಮಕ್ಕಳು, ಮಹಿಳೆಯರು, ಸಕ್ಕರೆ ಕಾಯಿಲೆಯಿಂದ ಬಳಲುವ ರೋಗಿಗಳು ಪರದಾಡುತ್ತಿದ್ದಾರೆ. ವನ್ಯಜೀವಿಗಳ ಭೀತಿಯ ನಡುವೆಯೂ ಕದ್ದುಮುಚ್ಚಿ ಅರಣ್ಯ ಪ್ರದೇಶದೊಳಗೆ ಹೋಗಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಶೌಚಗೃಹಗಳು ಬಳಕೆಗೆ ಬರುವಂತೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.